ನವದೆಹಲಿ: ಶೀನಾ ಬೋರಾ ಕೊಲೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಟಿವಿ ವಾಹಿನಿಯೊಂದರ ಮಾಜಿ ಮುಖ್ಯಸ್ಥ ಪೀಟರ್ ಮುಖರ್ಜಿಯ ಜಾಮೀನು ಅರ್ಜಿಗೆ ಸಿಬಿಐ ಶನಿವಾರ ವಿರೋಧ ವ್ಯಕ್ತಪಡಿಸಿದೆ.
ಸಿಬಿಐ ವಿಶೇಷ ಕೋರ್ಟ್ ಇಂದು ಪೀಟರ್ ಮುಖರ್ಜಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಹೆಚ್ಚಿನ ತನಿಖೆಯ ಅಗತ್ಯವಿದ್ದು, ಆರೋಪಿಗೆ ಜಾಮೀನು ನೀಡದಂತೆ ಸಿಬಿಐ ಮನವಿ ಮಾಡಿತು. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.
ಈ ವೇಳೆ ಕುಟುಂಬ ಸದಸ್ಯರು ಪೀಟರ್ ಮುಖರ್ಜಿಯನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಮುಖರ್ಜಿ ಪರ ವಕೀಲ ಕುಶಾಲ್ ಮೋರ್ ಅವರು ಮನವಿ ಮಾಡಿದರು. ಇದಕ್ಕೆ ಕೋರ್ಟ್ ಅನುಮತಿ ನೀಡಿದೆ.
ಜನವರಿ 11ರಂದು ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಪೀಟರ್ ಮುಖರ್ಜಿಯ ನ್ಯಾಯಾಂಗ ಬಂಧನದ ಅವಧಿಯನ್ನು ಜನವರಿ 25ರವರೆಗೆ ವಿಸ್ತರಿಸಿತ್ತು.
ಶೀನಾ ಬೋರಾ ಕೊಲೆ ಸಂಚಿನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕಳೆದ ನವೆಂಬರ್ 19ರಂದು 59 ವರ್ಷದ ಪೀಟರ್ ಮುಖರ್ಜಿಯನ್ನು ಪೊಲೀಸರು ಬಂಧಿಸಿದ್ದರು.