
ಭುವನೇಶ್ವರ: ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಎರಡು ತಲೆಯ ವಿಚಿತ್ರ ಮಗು ಜನಿಸಿದ್ದು, ಹುಟ್ಟಿದ ಕೇವಲ 12 ನಿಮಿಷದಲ್ಲಿ ಮಗು ಸಾವನ್ನಪ್ಪಿದೆ.
ರೋಸಲಿನ್ ಸತ್ಪತಿ ಎಂಬ 25 ವರ್ಷದ ಮಹಿಳೆ ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 4.30ರ ಹೊತ್ತಿನಲ್ಲಿ ಈ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ. ಎರಡು ತಲೆಯ ಮಗು ಜನನ ನೋಡಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೇ ಕೆಲಕಾಲ ದಿಗ್ಭ್ರಾಂತರಾದರು.
ಕಳೆದ ಗುರುವಾರ ಸಂಜೆ ನೋವಿನಿಂದ ಬಳಲುತ್ತಿದ್ದ ರೋಸಲಿನ್ ಸತ್ಪತಿ ಅವರನ್ನು ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆ ದಾಖಲಿಸಲಾಗಿತ್ತು. ಮಹಿಳೆಯನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆಯಲು ಮುಂದಾದರು. ಅದರಂತೆ ಶುಕ್ರವಾರ ಮುಂಜಾನೆ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಯಶಸ್ವಿಯಾಗಿ ಮಗುವನ್ನು ಹೊರತೆಗೆದರು. ಮಗುವಿಗೆ ಎರಡು ತಲೆ ಇರುವುದನ್ನು ಹೊರತುಪಡಿಸಿದರೆ, ಮಗುವಿನ ಉಳಿದೆಲ್ಲಾ ಅಂಗಾಂಗಳು ಸಾಮಾನ್ಯವಾಗಿದ್ದವು. ಹುಟ್ಟುವಾಗ ಸಾಮಾನ್ಯ ಮಕ್ಕಳಂತೆ ಇದ್ದ ಮಗು ಕೇಲವೆ ನಿಮಿಷಗಳಲ್ಲಿ ಉಸಿರಾಟ ತೊಂದರೆಗೀಡಾಯಿತು.
ಹೀಗಾಗಿ ಕೂಡಲೇ ಮಗುವನ್ನು ವೈದ್ಯರು ಐಸಿಯುಗೆ ರವಾನಿಸಿದರೂ ತೀವ್ರ ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪಿದೆ. ಪ್ರಸ್ತುತ ಮಗುವಿನ ತಾಯಿ ರೋಸಲಿನ್ ಸತ್ಪತಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ವಿಚಿತ್ರ ಮಗುವಿನ ಜನನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವೈದ್ಯರು, ಬಹಳ ಅಪರೂಪದ ಪ್ರಕರಣಗಳಲ್ಲಿ ಇಂತಹ ಮಕ್ಕಳು ಜನಿಸುತ್ತವೆ. ವೈಜ್ಞಾನಿಕ ಬಾಷೆಯಲ್ಲಿ ಇದನ್ನು ಡಿಸೆಫಾಲಿಕ್ ಟ್ವಿನ್ಸ್ ಎಂದು ಕರೆಯಲಾಗುತ್ತದೆ. ಇಂತಹ ಮಕ್ಕಳು ಬದುಕುವ ಅವಕಾಶ ತೀರಾ ಕಡಿಮೆ ಎಂದೂ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
Advertisement