
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಬೇಕಾದ ಎಲ್ಲಾ ಭದ್ರತೆಯನ್ನು ನೀಡಿದ್ದು, ಆಪ್ ನಾಯಕರು ರಾಜಕೀಯ ಪ್ರೇರಿತ ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರ ಮೇಲಿನ ಮಸಿ ಪ್ರಕರಣ ಸಂಬಂಧ ದೆಹಲಿ ಪೊಲೀಸರ ಮೇಲೆ ಕೇಳಿಬರುತ್ತಿರುವ ಆರೋಪ ಕುರಿತಂತೆ ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿರುವ ಅವರು. ಉಪ ಮುಖ್ಯಮಂತ್ರಿ ಸೇರಿದಂತೆ ಆಮ್ ಆದ್ಮಿ ಪಕ್ಷದ ಕೆಲವು ಅಧಿಕಾರಿಗಳು ದೆಹಲಿ ಪೊಲೀಸರ ವಿರುದ್ಧ ಆಧಾರ ರಹಿತ ಹಾಗೂ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದೆ. ಮುಖ್ಯಮಂತ್ರಿ ಅವರಿಗೆ ನೀಡಬೇಕಿದ್ದ ಎಲ್ಲಾ ರೀತಿಯ ಭದ್ರತೆಗಳನ್ನು ನೀಡಲಾಗಿತ್ತು. ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನವೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಭದ್ರತೆಯಲ್ಲಿ ಯಾವುದೇ ಲೋಪವಿರಲಿಲ್ಲ ಎಂದು ಹೇಳಿದ್ದಾರೆ.
ಮಸಿ ದಾಳಿ ನಡೆಯುತ್ತಿದ್ದಂತೆ ಮಹಿಳೆಯನ್ನು ವಶಕ್ಕೆ ಪಡೆಯಲಾಗಿತ್ತು. ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೊಳಪಡಿಸಲಾಗಿತ್ತು. ಎಲ್ಲಾ ರೀತ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಭದ್ರತೆ ವಿಚಾರದಲ್ಲೂ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಮ-ಬೆಸ ನಿಯಮ ಯಶಸ್ಸು ಕಾಣಲು ಕಾರಣರಾದ ದೆಹಲಿ ಜನರಿಗೆ ಧನ್ಯವಾದ ಹೇಳುವ ಸಲುವಾಗಿ ಚತ್ರಸಾಲ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆಯೊಂದನ್ನು ಏರ್ಪಡಿಸಿದ್ದರು. ಸಭೆಯನ್ನುದ್ದೇಶಿಸಿ ಕೇಜ್ರಿವಾಲ್ ಅವರು ಮಾತನಾಡಿದ್ದ ವೇಳೆ ಇದ್ದಕ್ಕಿದ್ದಂತೆ ಬಂದ ಮಹಿಳೆಯೊಬ್ಬಳು ಅವರ ಮೇಲೆ ಮಸಿ ಹಾಗೂ ಕೆಲವು ಪೇಪರ್ ಗಳನ್ನು ಎಸೆದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಳು. ನಂತರ ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದರು.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬಿಜೆಪಿ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರು. ಅಲ್ಲದೆ, ದೆಹಲಿ ಪೊಲೀಸರ ಭದ್ರತೆ ಕುರಿತಂತೆ ಕಿಡಿಕಾರಿದ್ದರು.
ಇದೊಂದು ಗಂಭೀರವಾದ ವಿಚಾರವಾಗಿದೆ. ಘಟನೆ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ಬಿಜೆಪಿಯವರು ದೆಹಲಿ ಪೊಲೀಸರ ಸಹಾಯದಿಂದ ಈ ಕೃತ್ಯವೆಸಗಿರುವುದಾಗಿ ಅನುಮಾನಗಳು ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭಗಳ ಪ್ರಯೋಜನ ಪಡೆಯಲು ಬಿಜೆಪಿ ಯಾವಾಗಲೂ ಬಯಸುತ್ತದೆ. ಕೇಜ್ರಿವಾಲ್ ಮತ್ತು ಇಡೀ ಸಂಪುಟದ ಮೇಲೆ ದಾಳಿ ನಡೆಸಲು ಬಿಜೆಪಿ ಬಯಸುತ್ತದೆ. ಸಮ-ಬೆಸ ನಿಯಮದ ಯಶಸ್ಸು ಹಾಗೂ ಜನರ ಬಳಿ ಆಮ್ ಆದ್ಮಿ ಪಕ್ಷ ಜನಪ್ರಿಯತೆ ಹೊಂದುತ್ತಿರುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಬಿಜೆಪಿ ಜನರನ್ನು ಕೊಲ್ಲಲೂಬಹುದು.
ಘಟನೆ ನಡೆಯುತ್ತಿದ್ದರೂ ದೆಹಲಿ ಪೊಲೀಸರು ವೀಕ್ಷಕರಂತೆ ನೋಡುತ್ತಲೇ ನಿಂತಿದ್ದರು. ಇದೊಂದು ದೆಹಲಿ ಪೊಲೀಸರ ಭದ್ರತಾ ವೈಫಲ್ಯ. ಒಂದು ವೇಳೆ ಇದು ಬಾಂಬ್ ಅಥವಾ ಆ್ಯಸಿಡ್ ದಾಳಿಯಾಗಿದ್ದರೆ ಇದರ ಪರಿಣಾಮ ಏನಾಗುತ್ತಿತ್ತು. ಕೇಜ್ರಿವಾಲ್ ಮೇಲೆ ದಾಳಿ ಆಗಲಿ ಎಂದು ಪೊಲೀಸರು ಎದುರು ನೋಡುತ್ತಿದ್ದರೇ? ಭದ್ರತೆ ಒದಗಿಸುವ ದೆಹಲಿ ಪೊಲೀಸರು ಎಲ್ಲಿ ಹೋಗಿದ್ದರು? ಸಾವಿರಾರು ಜನ ಸೇರುವ ಕಾರ್ಯಕ್ರಮದ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ. ಕಾರ್ಯಕ್ರಮದ ವೇಳೆ ಯಾವುದೇ ತಪಾಸಣೆ ನಡೆಸಿರಲಿಲ್ಲ. ಸಾರ್ವಜನಿಕರ ಭದ್ರತೆ ಬಗ್ಗೆ ಪೊಲೀಸರಿಗೆ ಕಾಳಜಿ ಇಲ್ಲ.
ಮಸಿ ಎರಚಿದ ನಂತರ ಯುವತಿ ಮಾಧ್ಯಮಗಳ ಬಳಿ ಮಾತನಾಡಲು ಸಾಧ್ಯ ಹೇಗೆ ಆಯಿತು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದರೆ ಘಟನೆ ಹಿಂದೆ ಬಿಜೆಪಿ ನಾಯಕರ ಷಡ್ಯಂತರ ಇರುವುದು ಖಚಿತವಾಗುತ್ತದೆ ಎಂದು ಹೇಳಿದ್ದರು.
Advertisement