
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ನಡೆದ ಮಸಿ ದಾಳಿ ಘಟನೆಯನ್ನು ಬಿಜೆಪಿ ಖಂಡಿಸಿದ್ದು, ಪ್ರಕರಣ ಕುರಿತಂತೆ ಸೂಕ್ತ ತನಿಖೆ ಆಗ್ರಹಿಸಿದೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ನಳಿನ್ ಕೊಹ್ಲಿ ಅವರು, ಕೇಜ್ರಿವಾಲ್ ಮೇಲೆ ನಡೆದ ಮಸಿ ದಾಳಿಯನ್ನು ಬಿಜೆಪಿ ಖಂಡಿಸುತ್ತದೆ. ಘಟನೆ ಹಿಂದೆ ವ್ಯಕ್ತಿ ಅಥವಾ ಗುಂಪಿನ ಕೈವಾಡವಿದೆಯೇ ಎಂಬುದರ ಕುರಿತಂತೆ ಸೂಕ್ತ ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ.
ಒಬ್ಬ ವ್ಯಕ್ತಿಯ ಮೇಲೆ ಚಪ್ಪಲಿ ಎಸೆಯುವುದು, ಹೊಡೆಯುವುದು, ಮಸಿ ಎರಚುವುದು ನಿಜಕ್ಕೂ ಸರಿಯಾದ ಬೆಳವಣಿಗೆಯಲ್ಲ. ಈ ರೀತಿಯ ಘಟನೆಗಳು ನಾಗರೀಕ ಸಮಾಜದಲ್ಲಿ ನಡೆಯಬಾರದು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ನಾವು ಕೇಜ್ರಿವಾಲ್ ಹಾಗೂ ಅವರ ರಾಜಕೀಯವನ್ನು ವಿರೋಧಿಸುತ್ತೇವೆ. ಆದರೆ ಈ ರೀತಿಯ ಘಟನೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಮ-ಬೆಸ ನಿಯಮ ಯಶಸ್ಸು ಕಾಣಲು ಕಾರಣರಾದ ದೆಹಲಿ ಜನರಿಗೆ ಧನ್ಯವಾದ ಹೇಳುವ ಸಲುವಾಗಿ ಚತ್ರಸಾಲ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆಯೊಂದನ್ನು ಏರ್ಪಡಿಸಿದ್ದರು. ಸಭೆಯನ್ನುದ್ದೇಶಿಸಿ ಕೇಜ್ರಿವಾಲ್ ಅವರು ಮಾತನಾಡಿದ್ದ ವೇಳೆ ಇದ್ದಕ್ಕಿದ್ದಂತೆ ಬಂದ ಮಹಿಳೆಯೊಬ್ಬಳು ಅವರ ಮೇಲೆ ಮಸಿ ಹಾಗೂ ಕೆಲವು ಪೇಪರ್ ಗಳನ್ನು ಎಸೆದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಳು. ನಂತರ ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದರು. ನಂತರ ಮಹಿಳೆಗೆ ಬಂಧನದ ದಿನ ತಡರಾತ್ರಿಯೇ ಜಮೀನು ಮಂಜೂರಾಗಿತ್ತು.
Advertisement