
ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಗೆ ಬಹಿರಂಗ ಸಮಾರಂಭದಲ್ಲಿ ಮಸಿ ಬಳಿದ ಮಹಿಳೆಗೆ ಭಾನುವಾರ ತಡರಾತ್ರಿ ಜಾಮೀನು ಮಂಜೂರಾಗಿರುವುದಾಗಿ ಸೋಮವಾರ ತಿಳಿದುಬಂದಿದೆ.
ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಮ-ಬೆಸ ನಿಯಮ ಯಶಸ್ಸು ಕಾಣಲು ಕಾರಣರಾದ ದೆಹಲಿ ಜನರಿಗೆ ಧನ್ಯವಾದ ಹೇಳುವ ಸಲುವಾಗಿ ಚತ್ರಸಾಲ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆಯೊಂದನ್ನು ಏರ್ಪಡಿಸಿದ್ದರು. ಸಭೆಯನ್ನುದ್ದೇಶಿಸಿ ಕೇಜ್ರಿವಾಲ್ ಅವರು ಮಾತನಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬಂದ ಮಹಿಳೆಯೊಬ್ಬಳು ಅವರ ಮೇಲೆ ಮಸಿ ಹಾಗೂ ಕೆಲವು ಪೇಪರ್ ಗಳನ್ನು ಎಸೆದು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಳು.
ಮಸಿ ಎಸೆದ ಮಹಿಳೆಯನ್ನು ಭಾವನಾ ಎಂದು ಹೇಳಲಾಗುತ್ತಿತ್ತು. ಘಟನೆ ನಂತರ ಆಕೆಯನ್ನು ಬಂಧನಕ್ಕೊಳಪಡಿಸಿದ್ದ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ದಿದ್ದರು. ಇದೀಗ ಮಸಿ ಬಳಿದ ಮಹಿಳೆಗೆ ಜಾಮೀನು ದೊರೆತಿದೆ ಎಂದು ಹೇಳಲಾಗುತ್ತಿದ್ದು, ಬಂಧನ ದಿನದ ತಡರಾತ್ರಿಯೇ ಆಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಸಿ ಹಾಕಿದ ಮಹಿಳೆ, ಸಮ-ಬೆಸ ನಿಯಮ ಧನಾತ್ಮಕ ಬೆಳವಣಿಗೆ ಹೌದು, ಆದರೆ, ಇದರ ಹಿಂದೆ ದೊಡ್ಡ ಸಿಎನ್ ಜಿ ಹಗರಣವಿದೆ. ಈ ಕುರಿತಂತೆ ನನ್ನ ಬಳಿ ದಾಖಲೆಗಳಿವೆ. ಹೀಗಾಗಿ ನಾನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಸಾರಿಗೆ ಸಚಿವ ಗೋಪಾಲ್ ರೈಜಿ ಅವರನ್ನು ಭೇಟಿ ಮಾಡಲು ಬಂದಿದ್ದೆ. ಆದರೆ ಅವರು ನನ್ನನ್ನು ಭೇಟಿ ಮಾಡಲು ಒಪ್ಪಿಕೊಂಡಿರಲಿಲ್ಲ ಎಂದು ಹೇಳಿದ್ದಾಳೆ
ದ್ವಿಚಕ್ರ ವಾಹನಗಳ ಸಂಖ್ಯೆಗಳಿಗೆ ಸಿಎನ್ ಜಿ ಸ್ಟಿಕರ್ ಗಳನ್ನು ನೀಡಲಾಗಿತ್ತು. ಇಂದು ನಾನು ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ. ಹಾಗೂ ಈ ಬಗ್ಗೆ ನನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ. ಹಗರಣ ಕುರಿತಂತೆ ತನಿಖೆಯಾಗಲೇಬೇಕಿದೆ.
ದಾಳಿ ಮಾಡಿದ ನಂತರ ಆಪ್ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಆದರೆ ನನ್ನನ್ನು ರಕ್ಷಣೆ ಮಾಡಿ ಠಾಣೆಗೆ ಕರೆತಂದ ದೆಹಲಿ ಪೊಲೀಸರಿಗೆ ಧನ್ಯವಾದಗಳು ಎಂದು ಹೇಳಿದ್ದಾಳೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್ ಅವರು, ಮಹಿಳೆಯನ್ನು ಬಿಟ್ಟುಬಿಡಿ. ಆಕೆ ಯಾವುದೋ ಹಗರಣದ ಕುರಿತಂತೆ ಮಾತನಾಡುತ್ತಿದ್ದಾರೆ. ಅವರ ಬಳಿ ಇರುವ ದಾಖಲೆಗಳನ್ನು ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.
Advertisement