ಆತ್ಮಹತ್ಯೆ ಮಾಡಿಕೊಂಡ ಸಂಶೋಧನಾ ವಿದ್ಯಾರ್ಥಿ ರೋಹಿತ್ ಡೆತ್ ನೋಟ್ ನಲ್ಲೇನಿದೆ?

ನಾನು ವಿಜ್ಞಾನವನ್ನು, ನಕ್ಷತ್ರಗಳನ್ನು, ಪ್ರಕೃತಿಯನ್ನು ಪ್ರೀತಿಸಿದೆ. ಆದರೆ ನಾನು ನನಗರಿವಿಲ್ಲದಂತೆಯೇ ಪ್ರಕೃತಿಯಿಂದಲೇ ದೂರವಾಗಿರುವ ಮನುಷ್ಯರನ್ನು ಪ್ರೀತಿಸಿದೆ....
ರೋಹಿತ್ ವೇಮುಲಾ
ರೋಹಿತ್ ವೇಮುಲಾ
Updated on
ಹೈದರಾಬಾದ್: ಹೈದರಾಬಾದ್ ವಿವಿಯ ವಿದ್ಯಾರ್ಥಿನಿಲಯದಿಂದ ಉಚ್ಛಾಟಿತನಾಗಿ, ಆತ್ಮಹತ್ಯೆ ಮಾಡಿಕೊಂಡಿರುವ ದಲಿತ ಸಂಶೋಧಕ ರೋಹಿತ್ ವೇಮುಲಾ ಅವರು ಬರೆದ ಡೆತ್ ನೋಟ್ ನ ಅನುವಾದ ಇಲ್ಲಿದೆ.
ಗುಡ್ ಮಾರ್ನಿಂಗ್, 
ಈ ಪತ್ರವನ್ನು ನೀವು ಓದುವಾಗ ನಾನಿಲ್ಲಿರುವುದಿಲ್ಲ. ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ, ಪ್ರೀತಿಸಿದ್ದೀರಿ. ನನಗೆ ಯಾರ ಮೇಲೆಯೂ ಕೋಪವಿಲ್ಲ. ಇದೆಲ್ಲವೂ ನನ್ನೊಳಗಿರುವ ನನ್ನದೇ ಆದ ಸಮಸ್ಯೆಗಳು. ನನ್ನ ಆತ್ಮ ಮತ್ತು ನನ್ನ ದೇಹದ ನಡುವೆ ಅಂತರವನ್ನು ನಾನು ಅನುಭವಿಸಿದ್ದೀನಿ. ನಾನು ಆ ಹೊತ್ತು ನಾನಾಗಿರಲಿಲ್ಲ. ನಾನೊಬ್ಬ ಲೇಖಕಕನಾಗಲು ಬಯಸಿಸಿದ್ದೆ. ವಿಜ್ಞಾನದ ಲೇಖಕ ಕಾರ್ಲ್ ಸಾಗನ್ ನಂಥಾ ಲೇಖಕನಾಗಲು ಬಯಸಿದ್ದೆ. ಆದರೆ ನಾನು ಕೊನೆಯದಾಗಿ ಇದೊಂದೇ ಪತ್ರವನ್ನು ಬರೆಯುತ್ತಿದ್ದೇನೆ.
ನಾನು ವಿಜ್ಞಾನವನ್ನು, ನಕ್ಷತ್ರಗಳನ್ನು, ಪ್ರಕೃತಿಯನ್ನು ಪ್ರೀತಿಸಿದೆ. ಆದರೆ ನಾನು ನನಗರಿವಿಲ್ಲದಂತೆಯೇ ಪ್ರಕೃತಿಯಿಂದಲೇ ದೂರವಾಗಿರುವ ಮನುಷ್ಯರನ್ನು ಪ್ರೀತಿಸಿದೆ. ನಮ್ಮ ಭಾವನೆಗಳು ಅಲ್ಲಿ ಸೆಕೆಂಡ್ ಹ್ಯಾಂಡೆಡ್ ಆಗಿದ್ದವು. ನಮ್ಮ ಪ್ರೀತಿ ಇಲ್ಲಿ ಕೃತಕವಾಗಿದೆ. ನಮ್ಮ ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಮ್ಮ ನೈಜತೆಯನ್ನು ಕೃತಕ ಕಲೆಯ ಮೂಲಕ ಮೌಲ್ಯ ಮಾಪನ ಮಾಡಲಾಗಿತ್ತಿದೆ. ನೋವು ಅನುಭವಿಸದೆ ಪ್ರೀತಿ ಪಡೆದುಕೊಳ್ಳುವುದು ಇಲ್ಲಿ ಕಷ್ಟವಾಗುತ್ತಿದೆ.
ಮನುಷ್ಯನೊಬ್ಬನ ಮೌಲ್ಯವು ತಕ್ಷಣದ ಗುರುತಿಸುವಿಕೆ ಮತ್ತು ಆ ಕ್ಷಣದ ಅವಕಾಶಗಳಿಗೆ ಪೂರಕವಾಗಿ ಸಂಕುಚಿತಗೊಂಡಿದೆ. ಈ ಲೋಕದಲ್ಲಿ ಮನುಷ್ಯನೊಬ್ಬ ನೈಸರ್ಗಿಕ ಪ್ರಜ್ಞೆಯುಳ್ಳ ಜೀವಿಯಾಗಿ ಗುರುತಿಸಲ್ಪಡದೆ ಮತವಾಗಿ, ಸಂಖ್ಯೆಯಾಗಿ, ವಸ್ತುವಾಗಿ ಪರಿಗಣಿಸಲ್ಪಟ್ಟಿದ್ದಾನೆ. ಎಲ್ಲ ಕ್ಷೇತ್ರಗಳಲ್ಲಿ ಅಂದರೆ, ಅಧ್ಯಯನ, ಹಾದಿ ಬೀದಿ, ರಾಜಕೀಯ, ಸಾವು ಬದುಕು ಎಲ್ಲೆಂದರಲ್ಲಿರುವ ನೈಸರ್ಗಿಕ ಸೌಂದರ್ಯಕ್ಕೀಗ ಧೂಳು ಆವರಿಸಿದೆ.
ಇಂಥಾ ಒಂದು ಪತ್ರವನ್ನು ನಾನು ಇದೇ ಮೊದಲ ಬಾರಿ ಬರೆಯುತ್ತಿದ್ದೇನೆ. ಇದೇ ನನ್ನ ಕೊನೆಯ ಪತ್ರವೂ ಆಗಿದೆ. ನನ್ನ ಭಾವನೆಗಳು ನಿಮಗೆ ಅರ್ಥವಾಗಗೇ ಹೋದರೆ ದಯವಿಟ್ಟು ನನ್ನನ್ನು ಕ್ಷಮಿಸಿ.
ಜಗತ್ತನ್ನು ನಾನು ಅರಿಯುವಲ್ಲಿ ನನ್ನಿಂದ ತಪ್ಪಾಗಿರಬಹುದು. ಪ್ರೀತಿ, ನೋವು, ಜೀವನ ಮತ್ತು ಬದುಕನ್ನು ಅರ್ಥಮಾಡುವಲ್ಲಿ ನಾನು ತಪ್ಪಾಗಿರಬಹುದು. ಅವಸರವೇನಿಲ್ಲ. ನನಗೆ ನನ್ನ ಜೀವನವನ್ನು ಬದುಕಬೇಕೆಂಬ ಉತ್ಸಾಹವಿತ್ತು. ಆದರೆ ಕೆಲವು ಜನರಿಗೆ ಜೀವನ ಎಂಬುದು ಒಂದು ಸಂಗತಿ ಅಷ್ಟೇ. ನನ್ನ ಹುಟ್ಟು ಆಕಸ್ಮಿತ. ನಾನು ನನ್ನ ಬಾಲ್ಯದ ಒಂಟಿತನದಿಂದ ಚೇತರಿಸಿಕೊಂಡೇ ಇಲ್ಲ. ಈ ಹಿಂದೆ ನಾನು ಯಾರೂ ಹೊಗಳದ, ಗುರುತಿಸದ ಮಗುವಾಗಿದ್ದೆ .
ಈ ಕ್ಷಣದಲ್ಲಿ ನಾನು ನೊಂದುಕೊಂಡಿಲ್ಲ. ಬೇಸರದಲ್ಲಿ ಇಲ್ಲ. ಆದರೆ ನಾನೀಗ ಖಾಲಿ. ನನ್ನ ಬಗ್ಗೆಯೇ ನನಗ್ಯಾವ ನಿರೀಕ್ಷೆಗಳಿಲ್ಲ.  ತನ್ನೊಳಗೇ ತಾನು ಇಲ್ಲದೇ ಇರುವ ಈ ಸ್ಥಿತಿಯೇ ಬದುಕಿನ ಅತ್ಯಂತ ಕರುಣಾಜನಕ ಸನ್ನಿವೇಶ. ಈ ಕಾರಣದಿಂದಲೇ ನಾನು ಈ ಕೃತ್ಯವನ್ನು ಮಾಡುತ್ತಿದ್ದೇನೆ.
ನಾನು ಹೋದ ಮೇಲೆ ಜನರು ನನ್ನನ್ನು ಹೇಡಿ, ಸ್ವಾರ್ಥಿ, ಮೂರ್ಖ ಎನ್ನಬಹುದು! ನಾನು ನನ್ನನ್ನು ಏನೆಂದು ಕರೆಯುತ್ತಾರೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ನಾನು ನನ್ನ ಸಾವಿನ ನಂತರದ ಬದುಕಿನ ಕುರಿತಾದ ದೆವ್ವ. ಆತ್ಮಗಳ ಕಥೆಗಳನ್ನು ನಂಬುವುದಿಲ್ಲ. ನಾನೇನಾದರೂ ನಂಬುವುದಾರೆ ನಾನು ನಕ್ಷತ್ರಗಳ ಬಳಿಗೆ ಹೋಗುತ್ತೇನೆ ಎಂದು ನಂಬುತ್ತೇನೆ. ಇನ್ನೊಂದು ಲೋಕದ ಬಗ್ಗೆ ನಾನು ಅರಿಯುತ್ತಿದ್ದೇನೆ ಎಂದು  ಅಂದುಕೊಳ್ಳುತ್ತೇನೆ. 
ಈ ಪತ್ರ ಓದುತ್ತಿರುವವರು ನನಗೆ ಒಂದು ಸಹಾಯ ಮಾಡುತ್ತೀರಿ ಎಂದು ನಂಬುತ್ತೇನೆ. ಏಳು ತಿಂಗಳಿನ ಶಿಷ್ಯವೇತನವಾದ ಒಂದು ಲಕ್ಷದ ಎಪ್ಪತೈದು ಸಾವಿರ ರೂಪಾಯಿ ಮಂಜೂರಾಗಿದೆ. ಅದನ್ನು ದಯಮಾಡಿ ನನ್ನ ಕುಟುಂಬಕ್ಕೆ ಕಳುಹಿಸಿ ಕೊಡಿ. ರಾಮ್ಗೆ ನಾನು ನಲವತ್ತು ಸಾವಿರ ಹಣ ನೀಡಬೇಕಿದೆ. ಅದನ್ನು ಅವನೆಂದೂ ಕೇಳಿಲ್ಲ, ಈ ಹಣದಲ್ಲಿ ಅಷ್ಟನ್ನು ಆತನಿಗೆ ನೀಡಿ. 
ನನ್ನ ಅಂತಿಮ ಸಂಸ್ಕಾರ ಮೌನವಾಗಿ ಸರಳವಾಗಿ ನಡೆಯಲಿ. ಹಾಗೆ ಕಾಣಿಸಿಕೊಂಡು, ಹೊರಟು ಹೋದ ಎಂಬಂತೆ ಭಾವಿಸಿ. ನನಗಾಗಿ ಕಣ್ಣೀರು ಹಾಕಬೇಡಿ. ಬದುಕಿರುವುದಕ್ಕಿಂತ ನಾನು ಸಾವಿನಲ್ಲಿ ಖುಷಿಯಾಗಿದ್ದೇನೆ. 
ನೆರಳಿನಿಂದ ನಕ್ಷತ್ರದೆಡೆಗೆ..
ಉಮಾ ಅಣ್ಣ, ಈ ಕೃತ್ಯಕ್ಕಾಗಿ ನಿಮ್ಮ ಕೋಣೆಯನ್ನು ಬಳಸಿದ್ದೇನೆ, ಕ್ಷಮೆಯಿರಲಿ.
ನನ್ನ ಕುಟುಂಬದವರಿಗೆ, ನಿಮ್ಮನ್ನು  ಬೇಸರ ಮಾಡಿದ್ದಕ್ಕೆ ಕ್ಷಮಿಸಿ.  ನೀವು ನನ್ನನ್ನು ತುಂಬಾ ಪ್ರೀತಿಸಿದ್ದೀರಿ. ಭವಿಷ್ಯಕ್ಕೆ ಶುಭ ಕಾಮನೆಗಳು
ಕೊನೆಯದಾಗಿ,
ಜೈ ಭೀಮ್
ಅಂದಹಾಗೆ ಪತ್ರದ ವಿಧಿ ವಿಧಾನಗಳನ್ನು ಬರೆಯಲು ಮರೆತೆ. ನಾನು ಈ ಕೃತ್ಯವೆಸಗಿರುವುದಕ್ಕೆ ಯಾರೂ ಹೊಣೆಯಲ್ಲ.
ಯಾರೊಬ್ಬರೂ ಮಾತಿನಿಂದಾಗಲೀ, ಕೃತಿಯಿಂದಾಗಲೀ ನಾನು ಈ ಕೃತ್ಯ ಮಾಡುವಂತೆ ಪ್ರೇರೇಪಿಸಿಲ್ಲ.
ಇದು ನನ್ನದೇ ನಿರ್ಧಾರ, ಇದಕ್ಕೆ ನಾನೇ ಹೊಣೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com