

ಚೆನ್ನೈ: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ತಮಿಳುನಾಡು ಸರ್ಕಾರದ ಅಮ್ಮಾ ಕಾಲ್ ಸೆಂಟರ್ ಗೆ ಮುಖ್ಯಮಂತ್ರಿ ಜಯಲಲಿತಾ ಜ.19 ರಂದು ಚಾಲನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಅಮ್ಮಾ ಕಾಲ್ ಸೆಂಟರ್ ನ್ನು ಸಿಎಂ ಜಯಲಲಿತಾ ಬಿಡುಗಡೆ ಮಾಡಿದ್ದು, ಜನರ ಸಮಸ್ಯೆಗಳನ್ನು ಆಲಿಸಲು ಇರುವ ಈ ವ್ಯವಸ್ಥೆ ದಿನದ 24 ಗಂಟೆ ವರ್ಷದ 365 ದಿನವೂ ಕಾರ್ಯ ನಿರ್ವಹಿಸಲಿದೆ. ಕಾಲ್ ಸೆಂಟರ್ ಗೆ ನೀಡಲಾಗಿರುವ "1100 " ಸಂಖ್ಯೆ ಸುಂಕರಹಿತವಾದ(ಟೋಲ್ ಫ್ರೀ) ನಂಬರ್ ಆಗಿದ್ದು ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಮುಖ್ಯಮಂತ್ರಿ ಕಾರ್ಯಾಲಯ ಈಗಾಗಲೇ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ವ್ಯವಸ್ಥೆ ಹೋಂದಿದೆಯಾದರೂ, ಅದನ್ನು ತ್ವರಿತಗತಿಯಲ್ಲಿ ಪರಿಹರಿಸುವುದಕ್ಕಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕಾಲ್ ಸೆಂಟರ್ ನ್ನು ತೆರೆಯಲಾಗಿದೆ. ಸಾರ್ವಜನಿಕರು ನೀಡಲಾಗುವ ದೂರನ್ನು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುತ್ತದೆ. ದೂರಿನ ಬಗ್ಗೆ ಕೈಗೊಳ್ಳಲಾದ ಕ್ರಮವನ್ನು ದೂರುದಾರರಿಗೆ ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಕಾಲ್ ಸೆಂಟರ್ ಪ್ರತಿ ದಿನ 15 ಸಾವಿರ ಕರೆಗಳನ್ನು ಸ್ವೀಕರಿಸಿ ಬಗೆಹರಿಸಲಿದೆ. ಇದಕ್ಕಾಗಿ 138 ನಿರ್ವಾಹಕರನ್ನು ನಿಯೋಜಿಸಲಾಗಿದ್ದು, ಅಗತ್ಯತೆ ಆಧಾರದಲ್ಲಿ ನಿರ್ವಾಹಕರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.