
ನವದೆಹಲಿ: ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಲ್ಲಿ ನಡೆದ ಉಗ್ರ ದಾಳಿ ಪ್ರಕರಣ ಸಂಬಂಧ ಎಲ್ಲರ ಅನುಮಾನಕ್ಕೆ ಕಾರಣವಾಗಿದ್ದ ಪಂಜಾಬ್ ಎಸ್ ಪಿ ಸಲ್ವಿಂದರ್ ಸಿಂಗ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕಳೆದ 2 ವಾರಗಳಿಂದ ಪಂಜಾಬ್ ಪೊಲೀಸ್ ಅಧಿಕಾರಿ ಸಲ್ವಿಂದರ್ ಸಿಂಗ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಪದೇ ಪದೇ ಹೇಳಿಕೆ ಬದಲಿಸುತ್ತಿದ್ದ ಸಲ್ವಿಂದರ್ ಸಿಂಗ್ ಅವರ ವರ್ತನೆಯನ್ನು ಕಂಡ ಅಧಿಕಾರಿಗಳು ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ಸುಳ್ಳುಪತ್ತೆ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಸಲ್ವಿಂದರ್ ಸಿಂಗ್ ಅವರ ವಿರುದ್ಧದ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ.
ಸಲ್ವಿಂದರ್ ಸಿಂಗ್ ಅವರಿಗೂ ಮತ್ತು ಉಗ್ರರಿಗೂ ಸಂಪರ್ಕ ವಿತ್ತು ಎಂಬ ಆರೋಪದ ಹಿನ್ನಲೆಯಲ್ಲಿ ಅಧಿಕಾರಿಗಳು ಅವರ ಸ್ವಗ್ರಾಮ ಮತ್ತು ಮನೆಯಲ್ಲೂ ಸಹ ಎನ್ಐಎ ತಪಾಸಣೆ ನಡೆಸಿದ್ದರು. ಆದರೆ ಇವುಗಳಿಂದ ಸಲ್ವಿಂದರ್ ಸಿಂಗ್ ಉಗ್ರರೊಂದಿಗೆ ಯಾವುದೇ ವಿಧದಲ್ಲಿ ಸಂಬಂಧ ಹೊಂದಿದ್ದಾರೆ ಎಂಬುದಕ್ಕೆ ಪುರಾವೆ ಸಿಕ್ಕಿಲ್ಲ. ಹಾಗಾಗಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಎನ್ ಐಎ ಮೂಲಗಳು ತಿಳಿಸಿವೆ.
ಪ್ರಸ್ತುತ ಎನ್ ಐಎ ಅಧಿಕಾರಿಗಳಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲವಾದರೂ, ಶೀಘ್ರದಲ್ಲಿಯೇ ಸುಳ್ಳುಪತ್ತೆ ಪರೀಕ್ಷೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ಆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಡಿಸೆಂಬರ್ 31ರಂದು ಸಲ್ವಿಂದರ್ ಸಿಂಗ್ ಮತ್ತು ಆಭರಣದಂಗಡಿಯ ಸ್ನೇಹಿತನೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಉಗ್ರರು ಅವರ ಕಾರನ್ನು ಅಡ್ಡಗಟ್ಟಿ ಅವರನ್ನು ಕಾರಿನೊಂದಿಗೆ ಅಪಹರಿಸಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಿದ್ದರು. ಇದು ಎಲ್ಲರ ಅನುಮಾನಕ್ಕೆ ಕಾರಣವಾಗಿತ್ತು.
Advertisement