ತನಿಖಾ ಆಯೋಗದ ಮುಂದೆ ಮುಖ್ಯಮಂತ್ರ ಊಮನ್ ಚಾಂಡಿ ವಿಚಾರಣೆ
ತನಿಖಾ ಆಯೋಗದ ಮುಂದೆ ಮುಖ್ಯಮಂತ್ರ ಊಮನ್ ಚಾಂಡಿ ವಿಚಾರಣೆ

ಕೇರಳ ಸೋಲಾರ್ ಫಲಕ ಹಗರಣ: ಕಾವೇರುತ್ತಿರುವ ಮುಖ್ಯಮಂತ್ರಿ ರಾಜೀನಾಮೆ ಪ್ರತಿಭಟನೆ

ಸೋಲಾರ್ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಊಮನ್ ಚಾಂಡಿ...
Published on

ತಿರುವನಂತಪುರ: ಸೋಲಾರ್ ಫಲಕ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಊಮನ್ ಚಾಂಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳ ಒತ್ತಡ, ಪ್ರತಿಭಟನೆ ತಾರಕಕ್ಕೇರುತ್ತಿದೆ. ಇಂದು ವಿರೋಧ ಪಕ್ಷದ ಕಾರ್ಯಕರ್ತರು ತಿರುವನಂತಪುರದ ರಸ್ತೆಗಳಲ್ಲಿ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ಚಕಮಕಿ ನಡೆಸುತ್ತಿದ್ದರು.

ನಿನ್ನೆಯಿಂದ ಕೇರಳ ರಾಜಧಾನಿಯಲ್ಲಿ ನಡೆದ ಪ್ರಮುಖ ಬೆಳವಣಿಗೆಗಳು ಹೀಗಿವೆ-
1. ರಾಜ್ಯ ಸರ್ಕಾರದ ಮುಖ್ಯ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಆಶ್ರುವಾಯು ಸಿಡಿಸಿದರು.
2. ತಮ್ಮ ವಿರುದ್ಧ ಎಫ್ ಐಆರ್ ದಾಖಲಿಸಿ ಆದೇಶ ಹೊರಡಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
3. ಮುಖ್ಯಮಂತ್ರಿಯವರ ಖಾಸಗಿ ಸಿಬ್ಬಂದಿಗೆ ಸುಮಾರು 2 ಕೋಟಿ ರೂಪಾಯಿ ಲಂಚ ನೀಡಲಾಗಿದೆ ಎಂದು ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ ಅವರು ಆರೋಪಿಸಿದಂತೆ ಮುಖ್ಯಮಂತ್ರಿ ಚಾಂಡಿ ವಿರುದ್ಧ ಮನವಿಯೊಂದನ್ನು ಸಲ್ಲಿಸಲಾಗಿದೆ.
4. 2013ರಲ್ಲಿ ತಮ್ಮ ತಾಯಿಯನ್ನು ಕರೆದು ಈ ವಿಷಯ ಬಹಿರಂಗಪಡಿಸದಂತೆ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಸರಿತಾ ನಾಯರ್ ಅವರನ್ನು ತನಿಖಾ ಆಯೋಗ ಮುಂದೆ ವಿಚಾರಣೆಗೊಳಪಡಿಸಲಾಯಿತು. ತಮ್ಮಿಂದ ಪಡೆದ ಹಣವನ್ನು ಹಿಂತಿರುಗಿಸುವುದಾಗಿ ಮುಖಂಡರು ಭರವಸೆ ನೀಡಿದ್ದರು ಎಂದು ಸವಿತಾ ನಾಯರ್ ತಿಳಿಸಿದ್ದಾರೆ.
5. ಕಡಿಮೆ ದರದಲ್ಲಿ ಸೌರ ಫಲಕಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿ ಕೈಗಾರಿಕೋದ್ಯಮಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿ ವಂಚಿಸಿದ್ದಕ್ಕಾಗಿ 2013ರಲ್ಲಿ ಸರಿತಾ ನಾಯರ್ ಮತ್ತು ಅವರ ಉದ್ಯಮ ಪಾಲುದಾರ ಬಿಜು ರಾಧಾಕೃಷ್ಣನ್ ಅವರನ್ನು ಬಂಧಿಸಲಾಗಿತ್ತು.
6. ಊಮನ್ ಚಾಂಡಿ ಮತ್ತು ಸರಿತಾ ನಾಯರ್ ಮಧ್ಯೆ ಅಕ್ರಮ ಸಂಬಂಧವಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಮುಖ್ಯಮಂತ್ರಿ ಕಚೇರಿಯಿಂದ ಆಕೆಗೆ ಹಲವಾರು ಕರೆಗಳು ಹೋಗಿವೆ. ತಾವು ಮುಖ್ಯಮಂತ್ರಿಯವರ ಮನೆಗೆ ಹಲವು ಬಾರಿ ಹೋಗಿದ್ದೇನೆ ಎಂದು ಹೇಳಿದ್ದಾರೆ.
7. ಆದರೆ ಮುಖ್ಯಮಂತ್ರಿ ಇದನ್ನು ನಿರಾಕರಿಸಿದ್ದಾರೆ. ನಾನ್ಯಾಕೆ ರಾಜೀನಾಮೆ ನೀಡಬೇಕು? ಪ್ರತಿಪಕ್ಷಗಳು ಆರೋಪ ಮಾಡುವುದರಲ್ಲಿ ಶೇಕಡಾ ಒಂದರಷ್ಟಾದರೂ ಸತ್ಯವಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿಡಿ, ರಾಜಕೀಯದಿಂದಲೇ ನಿರ್ಗಮಿಸುತ್ತೇನೆ ಎಂದು ಹೇಳಿದ್ದಾರೆ.
8. ತನಿಖಾ ಆಯೋಗವು ಮುಖ್ಯಮಂತ್ರಿಯವರನ್ನು ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಸರಿತಾ ನಾಯರ್ ಅವರ ವಕೀಲರು ಹೇಳಿದಂತೆ ಮುಖ್ಯಮಂತ್ರಿಯವರು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾರೆ.
9. ಸೋರಿಕೆಯಾದ ಧ್ವನಿಮುದ್ರಣವೊಂದು ಸರ್ಕಾರವನ್ನು ಮತ್ತಷ್ಟು ಸಮಸ್ಯೆಗೆ ತಂದೊಡ್ಡಿದೆ. ಅದರಲ್ಲಿ ಸ್ಥಳೀಯ ಕಾಂಗ್ರೆಸ್ ವಕ್ತಾರ ತಂಪನ್ನೂರ್ ರವಿ ಸರಿತಾ ನಾಯರ್ ಅವರಿಗೆ ನ್ಯಾಯಾಲಯದಲ್ಲಿ ಪ್ರಶ್ನೆ ಕೇಳುವಾಗ ಜಾಗರೂಕವಾಗಿರಿ ಎಂದು ಸಲಹೆ ನೀಡುವ ಧ್ವನಿ ಮುದ್ರಣವಿದೆ. ಆದರೆ ತಂಪನ್ನೂರು ರವಿ ಇದನ್ನು ನಿರಾಕರಿಸಿದ್ದಾರೆ.
10. ಇದೀಗ ಪ್ರತಿಪಕ್ಷಗಳು ಮುಖ್ಯಮಂತ್ರಿಯವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ವರ್ಷ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸೋಲಾರ್ ಹಗರಣ ಊಮನ್ ಚಾಂಡಿ ನೇತೃತ್ವದ ಯುಡಿಎಫ್ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿ, ವಿರೋಧ ಪಕ್ಷದ ಮುಖ್ಯ ಅಸ್ತ್ರವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com