

ನವದೆಹಲಿ: ಅರುಣಾಚಲಪ್ರದೇಶದಲ್ಲಿ ರಾಷ್ಟಪತಿ ಆಳ್ವಿಕೆ ಹೇರಲು ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದ ವ್ಯಕ್ತಿ ಯಾರು ಎಂದು ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಕಿಡಿ ಕಾರಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದ ಸಿನ್ಹಾ, ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದಂತೆ ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ಹೊರ ಹಾಕಿದ್ದಾರೆ.ಡೈನಾಮಿಕ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಶಾನ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಲಹೆ ನೀಡಿದ ಗ್ರೇಟ್ ಸಲಹೆಗಾರರು ಯಾರು ಎಂದು ವ್ಯಂಗ್ಯವಾಡಿದ್ದಾರೆ.
ರಾಷ್ಟ್ರಪತಿ ಆಳ್ವಿಕೆ ಹೇರಿಕೆ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವಾಗ ಕೇಂದ್ರ ಈ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪು ಕಾಂಗ್ರೆಸ್ ಪರವಾಗಿ ಬಂದರೆ ನಮ್ಮ ಪ್ರಧಾನಿ ತಮ್ಮ ನಿರ್ಧಾರಕ್ಕೆ ಏನು ಉತ್ತರ ಮತ್ತು ಸ್ಪಷ್ಟನೆ ಕೊಡಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.