
ಪಠಾಣ್ ಕೋಟ್: ಪಠಾಣ್ ಕೋಟ್ ಸೇನಾ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿ ಬೆನ್ನಲ್ಲೇ ಉಗ್ರರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಮದ್ದುಗುಂಡುಗಳ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಪಠಾಣ್ ಕೋಟ್ ನ ಮಲಿಕ್ ಪುರದಲ್ಲಿರುವ ಯುಬಿಡಿ ಕಾಲುವೆಯಲ್ಲಿ ಈ ಅಪಾರ ಪ್ರಮಾಣದ ಮದ್ದುಗುಂಡುಗಳು ಪತ್ತೆಯಾಗಿದ್ದು, ಪ್ರಸ್ತುತ ಎಲ್ಲ ವಸ್ತುಗಳನ್ನು ಸೈನಿಕರು ವಶ ಪಡಿಸಿಕೊಂಡಿದ್ದಾರೆ. ಯುಬಿಡಿ ಕಾಲುವೆಯಲ್ಲಿ ಇಂದು ಬೆಳಗ್ಗೆ ಸ್ಥಳೀಯ ಹುಡುಗರು ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಉಗ್ರ ಅಡಗಿಸಿಟ್ಟಿದ್ದ ಮೂಟೆ ದೊರೆತಿದ್ದು, ಹುಡುಗರು ಅದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಮದ್ದುಗುಂಡುಗಳು ಪತ್ತೆಯಾಗಿವೆ. ಕೂಡಲೇ ವಿಚಾರವನ್ನು ಸೈನಿಕರಿಗೆ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಸೈನಿಕರು ಮದ್ದುಗುಂಡುಗಳನ್ನು ವಶ ಪಡಿಸಿಕೊಂಡಿದ್ದಾರೆ. ಅಲ್ಲದೆ ಘಟನಾ ಸ್ಥಳದ ಸುತ್ತಮುತ್ತ ತೀವ್ರ ಶೋಧ ನಡೆಸುತ್ತಿದ್ದಾರೆ.
ಎಕೆ47 ಬಂದೂಕಿಗೆ ಬಳಕೆ ಮಾಡುವ ಬುಲೆಟ್ ನ ಒಟ್ಟು 2 ಮ್ಯಾಗಜಿನ್ ಗಳು, 59 ಜೀವಂತ ಕಾರ್ಟ್ ರಿಡ್ಜ್ ಗಳು, ಇನ್ಸಾಸ್ ಸರಣಿಯ ಬಂದೂಕಿನ 2 ಮ್ಯಾಗಜಿನ್ ಗಳು, 29 ಜೀವಂತ ಕಾರ್ಟ್ ರಿಡ್ಜ್ ಗಳು, ಪಾಯಿಂಟ್ 35 ಸರಣಿಯ ಬಂದೂಕಿನ 16 ಸುತ್ತು ಗುಂಡುಗಳು ಮತ್ತು 2 ಜೀವಂತ ಶೆಲ್ ಗಳು ಪತ್ತೆಯಾಗಿವೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಮತ್ತು ಸೈನಿಕರು ತನಿಖೆ ನಡೆಸುತ್ತಿದ್ದು, ಕಳೆದ ಜನವರಿ 2ರಂದು ಉಗ್ರರು ನಡೆಸಿದ್ದ ದಾಳಿ ವೇಳೆ ಉಗ್ರರು ಇವುಗಳನ್ನು ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪಠಾಣ್ ಕೋಟ್ ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ಸೈನಿಕರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
Advertisement