ಹಿಂಸಾಚಾರಕ್ಕೆ ತಿರುಗಿದ "ಕಾಪು ಘರ್ಜನ": ತುನಿಯಲ್ಲಿ ರತ್ನಾಂಚಲ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ

ಕಾಪು ಜನಾಂಗಕ್ಕೆ ಮೀಸಲಾತಿ ನೀಡುವಂತೆ ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ "ಕಾಪು ಘರ್ಜನ" ಪ್ರತಿಭಟನೆ ಭಾನುವಾರ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ತುನಿಯಲ್ಲಿ ರತ್ನಾಂಚಲ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ...
ತುನಿಯಲ್ಲಿ ರತ್ನಾಂಚಲ ಎಕ್ಸ್ ಪ್ರೆಸ್ ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು
ತುನಿಯಲ್ಲಿ ರತ್ನಾಂಚಲ ಎಕ್ಸ್ ಪ್ರೆಸ್ ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಅಮರಾವತಿ: ಕಾಪು ಜನಾಂಗಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ "ಕಾಪು ಘರ್ಜನ" ಪ್ರತಿಭಟನೆ ಭಾನುವಾರ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ತುನಿಯಲ್ಲಿ ರತ್ನಾಂಚಲ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯ ತುನಿ ರೈಲ್ವೇ ನಿಲ್ದಾಣದಲ್ಲಿ ಇಂದು ನಡೆದ ಪ್ರತಿಭಟನಾ ರ್ಯಾಲಿ ಇದ್ದಕ್ಕಿದ್ದಂತೆಯೇ ಹಿಂಸಾಚಾರಕ್ಕೆ ತಿರುಗಿದ್ದು, ನಿಲ್ದಾಣದಲ್ಲಿದ್ದ ರತ್ನಾಂಚಲ ಎಕ್ಸ್ ಪ್ರೆಸ್ ರೈಲಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲೆತ್ನಿಸಿದ ಹತ್ತಾರು ಪೊಲೀಸರಿಗೂ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಇನ್ನು ನಾಲ್ಕು ಪೊಲೀಸ್ ವಾಹನಗಳಿಗೂ ಕೂಡ ಬೆಂಕಿ ಹಚ್ಚಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಘಟನೆಯನ್ನು ವರದಿ ಮಾಡಲು ಬಂದ ಮಾಧ್ಯಮದವರ ಮೇಲೂ ಕೂಡ ದಾಳಿಗಳಾಗಿದ್ದು, ಖಾಸಗಿ ಸುದ್ದಿವಾಹಿನಿಗಳ ವ್ಯಾನ್ ಗಳನ್ನು ಧ್ವಂಸಮಾಡಲಾಗಿದೆ. ಅಲ್ಲದೆ ವರದಿಗಾರರ ಕ್ಯಾಮೆರಾಗಗಳನ್ನು ಕಸಿದುಕೊಂಡು ಅವುಗಳನ್ನು ಜಖಂಗೊಳಿಸಿ, ವರದಿಗೆ ತೆರಳಿದ ಪತ್ರಕರ್ತರ ಮೇಲೆ ತೀವ್ರ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೇ ಸ್ಥಳೀಯ ಪೊಲೀಸ್ ಠಾಣೆಯ ಮೇಲೂ ದಾಳಿ ಮಾಡಿರುವ ಪ್ರತಿಭಟನಾಕಾರರು ಇಡೀ ಠಾಣೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ರೈಲು ಸಂಚಾರ ದಿಢೀರ್ ಬಂದ್
ಇನ್ನು ತುನಿಯಲ್ಲಿ ಹಿಂಸಾಚಾರ ನಡೆಯುತ್ತಿರುವುದರಿಂದ ವಿಶಾಖಪಟ್ಟಣಂ ರೈಲ್ವೇ ನಿಲ್ದಾಣದಿಂದ ಹೊರಡಬೇಕಿದ್ದ ಎಲ್ಲ ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ತುನಿಯ ಸುತ್ತಮುತ್ತಲ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದು, ಹೆದ್ದಾರಿಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ತುರ್ತು ಪ್ರಹಾರ ದಳ, ಜಲಫಿರಂಗಿ, ಅಶ್ರುವಾಯುದಳಗಳು ಸೇರಿದಂತೆ ನೂರಾರು ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಹರಸಾಹಸ ಪಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com