ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಿವೃತ್ತ ಯೋಧರ ಈ ತಂಡ, ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ಸ್ಪಂದಿಸಲು ಸದಾ ಸಿದ್ಧ!

ಯೋಧರು ನಿವೃತ್ತಿಯಾದರೂ ಒಂದಲ್ಲಾ ಒಂದು ರೀತಿಯಲ್ಲಿ ದೇಶಸೇವೆ ಮಾಡುತ್ತಿರುತ್ತಾರೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಕೋಲ್ಕತಾ: ಯೋಧರು ನಿವೃತ್ತಿಯಾದರೂ ಒಂದಲ್ಲಾ ಒಂದು ರೀತಿಯಲ್ಲಿ ದೇಶಸೇವೆ ಮಾಡುತ್ತಿರುತ್ತಾರೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಕೋಲ್ಕಾತಾದಲ್ಲಿ ನಿವೃತ್ತ ಯೋಧರ ಬ್ರಿಗೇಡ್ ಸಪೋರ್ಟ್ ಎಲ್ಡರ್ಸ್ ಎಂಬ ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದು, ಅಗತ್ಯವಿರುವ ಹಿರಿಯ ನಾಗರಿಕರಿಗೆ ಆರೋಗ್ಯ ಸೇರಿದಂತೆ ವಿವಿಧ ರೀತಿಯಲ್ಲಿ ಸೇವೆ ಒದಗಿಸುತ್ತಿದೆ.
ಸಪೋರ್ಟ್ ಎಲ್ಡರ್ಸ್ ಎಂಬ ಸಂಘಟನೆಯಲ್ಲಿ ಸಕ್ರಿಯವಾಗಿರುವ ನಿವೃತ್ತ ಯೋಧ ಸೈಫುಲ್ ಅಲಾಂ ಸೇನೆಯಲ್ಲಿರಬೇಕಾದರೆ ಹಲವರ ಜೀವ ಉಳಿಸಿದ್ದಾರೆ. ಅಂತೆಯೇ ಈಗ ನಿವೃತ್ತಿಯಾದ ನಂತರ ಸಪೋರ್ಟ್ ಎಲ್ಡರ್ಸ್ ನ  ಭಾಗವಾಗಿದ್ದು ನೆರವಿನ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಅನೇಕರ ಜೀವ ಉಳಿಸುವ ಕಾಯಕವನ್ನು ಮುಂದುವರೆಸಿದ್ದಾರೆ.
ನಿವೃತ್ತಿಯ ನಂತರವೂ ಸಹ ನಾನೊಬ್ಬ ಯೋಧನೆಂಬ ಭಾವನೆ ಇದೆ ಎನ್ನುವ ಸೈಫುಲ್ಲಾ ಆಲಂ, ಸಮಾಜದ ಪ್ರಮುಖ ಭಾಗವಾದ ಹಿರಿಯ ನಾಗರಿಕರಿಗೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಿವೃತ್ತ ಬ್ರಿಗೇಡಿಯರ್ ಹಾಗೂ ಹಾಲಿ ಉದ್ಯಮಿಯಾಗಿರುವ ಅಪ್ರತಿಂ ಚಟ್ಟೋಪಾಧ್ಯಾಯ ಸಪೋರ್ಟ್ ಎಲ್ಡರ್ಸ್ ನ್ನು ಪ್ರಾರಂಭಿಸಿದ್ದು ಈ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರೆಲ್ಲರೂ 35 -45 ವರ್ಷದ ನಿವೃತ್ತ ಯೋಧರೇ ಆಗಿದ್ದಾರೆ.    
ಸಪೋರ್ಟ್ ಎಲ್ಡರ್ಸ್ ಹೆಸರೇ ಸೂಚಿಸುವಂತೆ ಹಿರಿಯ ನಾಗರಿಕರ ಸಹಾಯಕ್ಕಾಗಿ ಸ್ಥಾಪನೆಯಾಗಿರುವ ಸಂಘಟನೆಯಾಗಿದ್ದು, ನಗರ ಪ್ರದೇಶಗಳಿಂದ ದೂರದ ಪ್ರದೇಶಗಳಲ್ಲಿ ಒಂಟಿಯಾಗಿರುವ ಹಿರಿಯ ನಾಗರಿಕರು ಅಥವಾ ಮಕ್ಕಳಿಂದ ದೂರವಿರುವ ಹಿರಿಯ ದಂಪತಿಗಳಿಗೆ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಪೋರ್ಟ್ ಎಲ್ಡರ್ಸ್ ನ ಸದಸ್ಯರಿಗೆ ವಿಶಿಷ್ಟವಾಗಿರುವ ಸ್ಮಾರ್ಟ್ ಕೈಗಡಿಯಾರಗಳನ್ನು ನೀಡಲಾಗುತ್ತಿದೆ. ಫೋನ್ ಸಿಮ್ ಕಾರ್ಡ್ ನಿಂದ ಈ ಸ್ಮಾರ್ಟ್ ವಾಚ್ ಕಾರ್ಯನಿರ್ವಹಿಸಲಿದ್ದು ಇದಕ್ಕೆ ಅಲಾರ್ಮ್ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಸ್ಮಾರ್ಟ್ ಕೈಗಡಿಯಾರ ಹಿರಿಯನಾಗರಿಕರಿಗೆ ತುರ್ತು ವೈದ್ಯಕೀಯ ಸಹಾಯ ಅಗತ್ಯವಿದ್ದರೆ ಸಪೋರ್ಟ್ ಎಲ್ಡರ್ಸ್ ಸಹಾಯವಾಣಿಗೆ ಎಸ್ಒಎಸ್ ಸಂದೇಶ ಕಳಿಸಲಿದೆ. ಮಾಹಿತಿ ದೊರೆತ ಕೂಡಲೆ ಸಂಘಟನೆಯ ಸದಸ್ಯರು ಸ್ಥಳಕ್ಕೆ ತೆರಳಿ ಹಿರಿಯ ನಾಗರಿಕರಿಗೆ ಪ್ರಥಮ ಚಿಕಿತ್ಸೆ ಒದಗಿಸಲಿದ್ದಾರೆ.
ಪರಿಸ್ಥಿತಿ ಕೈಮೀರಿ ಹೋದರೆ ಸೇನೆಯೇ ಮೊದಲ ಆದ್ಯತೆಯಾಗಿರುತ್ತದೆ. ಅಂತೆಯೇ ಹಿರಿಯ ನಾಗರಿಕರಿಗೆ ಸಮಸ್ಯೆ ಎದುರಾದರೆ ಸೇವೆ ಒದಗಿಸಲು ಸೇನೆಯ ನಿವೃತ್ತ ಯೋಧರು ಸದಾ ಸಿದ್ಧವಿರುತ್ತಾರೆ ಎಂದು ಅಪ್ರತಿಂ ಚಟ್ಟೋಪಾಧ್ಯಾಯ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com