ಪಾಂಪೊರೆ ದಾಳಿ: ಉಗ್ರರನ್ನು ಕರೆತಂದಿದ್ದ ಚಾಲಕನ ಗುರುತು ಪತ್ತೆ

ಎಂಟು ಸಿಬ್ಬಂದಿಯನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪಾಂಪೊರೆಯ ಸಿಆರ್​ಪಿಎಫ್ ಬಸ್ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರನ್ನು ಕರೆತಂದಿದ್ದ ಕಾರಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶ್ರೀನಗರ: ಎಂಟು ಸಿಬ್ಬಂದಿಯನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪಾಂಪೊರೆಯ ಸಿಆರ್​ಪಿಎಫ್ ಬಸ್ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರನ್ನು ಕರೆತಂದಿದ್ದ ಕಾರಿನ ಚಾಲಕನ ಗುರುತು ಪತ್ತೆ ಹಚ್ಚಲಾಗಿದ್ದು, ಆತನ ಬಂಧನಕ್ಕೆ ವ್ಯಾಪಕ ಶೋಧ ನಡೆಸಲಾಗುತ್ತಿದೆ.
ಕಳೆದ ಜೂನ್​ನಲ್ಲಿ ಉತ್ತರ ಕಾಶ್ಮೀರದ ಗುಲ್ಮಾರ್ಗ್ ಬಳಿ ಗಡಿ ನಿಯಂತ್ರಣ ರೇಖೆ ದಾಟಿ 4 ಲಷ್ಕರ್ ಎ ತೊಯಿಬಾ ಉಗ್ರರು ಭಾರತದೊಳಗೆ ನುಸುಳಿದ್ದರು. ಅವರನ್ನು ಶ್ರೀನಗರದಿಂದ 57 ಕಿ.ಮೀ. ದೂರದಲ್ಲಿರುವ ಬಾಬಾ ರೇಶಿ ಎಂಬ ಸ್ಥಳದಿಂದ ಟಾಟಾ ಸುಮೋ ವಾಹನದಲ್ಲಿ ಪುಲ್ವಾಮಕ್ಕೆ ಕರೆತರಲಾಗಿತ್ತು. ನಂತರ ಅವರನ್ನು ಪುಲ್ವಾಮದಲ್ಲಿ ಅಡಗಿಸಿಡಲಾಗಿತ್ತು. ಇದೇ ಉಗ್ರರು ಜೂನ್ 25 ರಂದು ಸಿಆರ್​ಪಿಎಫ್ ಬಸ್ ಮೇಲೆ ದಾಳಿ ನಡೆಸಿ 8 ಯೋಧರನ್ನು ಹತ್ಯೆ ಮಾಡಿದ್ದರು ಮತ್ತು ಹಲವರನ್ನು ಗಾಯಗೊಳಿಸಿದ್ದರು.
ಘಟನೆ ನಡೆದ ನಂತರ ಕಾರಿನ ಚಾಲಕ ಮತ್ತು ಇಬ್ಬರು ಉಗ್ರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಕಾರಿನ ಚಾಲಕ ಬಹುದಿನಗಳಿಂದ ಉಗ್ರಗಾಮಿ ಚಟುವಟಿಕೆಗಳಿಗೆ ಸಹಕರಿಸುತ್ತಿದ್ದ ಎಂಬ ಮಾಹಿತಿ ಇದ್ದರೂ ಸಹ ಸಾಕ್ಷಾಧಾರಗಳ ಕೊರತೆಯಿಂದ ಆತನ ವಿರುದ್ಧ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ಪುಲ್ವಾಮದಲ್ಲಿ ಉಳಿದುಕೊಂಡಿದ್ದ ಉಗ್ರರು ಹೆದ್ದಾರಿಯಲ್ಲಿ ಸಂಚರಿಸಿ ಬಸ್ ಮೇಲೆ ದಾಳಿ ನಡೆಸಲು ಸ್ಥಳವನ್ನು ನಿಗದಿಪಡಿಸಿಕೊಂಡಿದ್ದರು. ದಾಳಿ ನಡೆದ ದಿನವೇ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು. ನಂತರ ತಪ್ಪಿಸಿಕೊಂಡಿದ್ದ ಮೂರನೇ ಉಗ್ರನನ್ನು ಜೂನ್ 30ರಂದು ಪುಲ್ವಾಮದ ಮಾಲ್ವಾರಿ ನೇವಾ ಗ್ರಾಮದ ಬಳಿ ಹೊಡೆದುರುಳಿಸಿದ್ದರು. ನಾಲ್ಕನೇ ಉಗ್ರ ಮತ್ತು ಕಾರಿನ ಚಾಲಕನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com