ನವದೆಹಲಿ: ಭ್ರಷ್ಟಾಚಾರ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಐವರನ್ನು ಸೋಮವಾರ ಸಿಬಿಐ ಬಂಧಿಸಿದೆ.
50 ಕೋಟಿ ರುಪಾಯಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಂತರ ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ಎಂಡೊವರ್ ಸಿಸ್ಟಮ್ಸ್ ಪ್ರೈವೇಟ್ ಲಿ. ಕಂಪನಿಯ ನಿರ್ದೇಶ ಸೇರಿದಂತೆ ಐವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರಾಜೇಂದ್ರ ಕುಮಾರ್ 50 ಕೋಟಿ ಹಗರಣದ ಕಿಂಗ್ ಪಿನ್ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಟೆಂಡರ್ ಕರೆಯದೇ ಕಂಪನಿಯೊಂದಕ್ಕೆ ಗುತ್ತಿಗೆ ನೀಡುವ ಮೂಲಕ ದೆಹಲಿ ಸರ್ಕಾರಕ್ಕೆ ಕೋಟ್ಯಾಂತರ ರುಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕುಮಾರ್ ಅವರು 2006ರಲ್ಲಿ ಎಂಡೊವರ್ ಸಿಸ್ಟಮ್ಸ್ ಪ್ರೈವೇಟ್ ಲಿ. ಎಂಬ ಕಂಪನಿಯನ್ನು ಸ್ಥಾಪಿಸಿ, ಸರ್ಕಾರಕ್ಕೆ ಸಾಫ್ಟವೇರ್ ಒದಗಿಸುವ ಗುತ್ತಿಗೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.
ಕುಮಾರ್ ಅವರು 1989ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಕೇಜ್ರಿವಾಲ್ ಅವರು ಎರಡನೇ ಬಾರಿ ಅಧಿಕಾರಕ್ಕೆ ಬಂದನ ನಂತರ ಕಳೆದ ಫೆಬ್ರುವರಿಯಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು.