

ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ನೂತನ ಸಚಿವರಿಗೆ ಸೂಚನೆ ನೀಡಿದ್ದಾರೆ.
ನೂತನ ಸಚಿವರಿಕೆ ಕೆಲವೊಂದು ಸೂಚನೆಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸಚಿವರಾಗಿರುವುದಕ್ಕೆ ಹೆಚ್ಚು ಸಂಭ್ರಮಿಸುವುದನ್ನು ಬಿಟ್ಟು ಸಂಸತ್, ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಹೇಳಿದ್ದಾರೆ. ನೂತನ ಸಚಿವರಿಗೆ ಮುಂಗಾರು ಅಧಿವೇಶನಕ್ಕೆ ಸಿದ್ಧತೆ ನಡೆಸಿಕೊಳ್ಳಲು ಸೂಚನೆ ನೀಡಿರುವ ಪ್ರಧಾನಿ ಮೋದಿ, ಸಚಿವರು ಮುಂಗಾರು ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ತಿಳಿಸಿದ್ದಾರೆ.
ನೂತನ ಸಚಿವರುಗಳನ್ನು ತಮ್ಮ ಕಚೇರಿಯಲ್ಲಿ ಭೇಟಿ ಮಾಡಿದ ಪ್ರಧಾನಿ, ಸಚಿವರೊಂದಿಗೆ ಮಾತನಾಡುತ್ತಾ " ನಾನು ಪ್ರಧಾನಿಯಾದ ಮೊದಲ ನಾಲ್ಕು ತಿಂಗಳು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಕಲಿತೆ. ರಾಜ್ಯ ಸಚಿವ ಸ್ಥಾನ ಈ ಸರ್ಕಾರದಲ್ಲಿ ಅತಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ನೀವೆಲ್ಲರೂ ವೇಗಗತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ಪ್ರಧಾನಿ ಮೋದಿ ಸಚಿವರಿಗೆ ತಿಳಿಸಿದ್ದಾರೆ. ಯಾವಾಗ ಅಗತ್ಯವಿದೆಯೋ ಆಗ ನೀವು ನನ್ನನ್ನು ಸಂಪರ್ಕಿಸಬಹುದು, ನಾನು ನಾಲ್ಕು ದಿನಗಳ ವರೆಗೆ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದೇನೆ ಎಂದು ಪ್ರಧಾನಿ ಮೋದಿ ನೂತನ ಸಚಿವರಿಗೆ ತಿಳಿಸಿದ್ದಾರೆ.