ವಿದ್ಯಾರ್ಥಿಗಳ ಪ್ರತಿಭಟನೆ ತಡೆಗಟ್ಟಲು ಪರಿಣಾಮಕಾರಿ ಮಾತುಕತೆ ಮುಖ್ಯ: ಪ್ರಕಾಶ್ ಜಾವಡೇಕರ್

ಇತ್ತೀಚಿನ ತಿಂಗಳುಗಳಲ್ಲಿ ವಿಶ್ವವಿದ್ಯಾಲಯ ಕ್ಯಾಂಪಸ್ ಗಳಲ್ಲಿ ಪ್ರತಿಭಟನೆ ಹೆಚ್ಚಾಗುತ್ತಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ನೂತನ ...
ಪ್ರಕಾಶ್ ಜಾವಡೇಕರ್-ಸ್ಮೃತಿ ಇರಾನಿ(ಸಂಗ್ರಹ ಚಿತ್ರ)
ಪ್ರಕಾಶ್ ಜಾವಡೇಕರ್-ಸ್ಮೃತಿ ಇರಾನಿ(ಸಂಗ್ರಹ ಚಿತ್ರ)
ನವದೆಹಲಿ: ಇತ್ತೀಚಿನ ತಿಂಗಳುಗಳಲ್ಲಿ ವಿಶ್ವವಿದ್ಯಾಲಯ ಕ್ಯಾಂಪಸ್ ಗಳಲ್ಲಿ ಪ್ರತಿಭಟನೆ ಹೆಚ್ಚಾಗುತ್ತಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ನೂತನ ಕೇಂದ್ರ ಶಿಕ್ಷಣ ಸಚಿವ ಪ್ರಕಾಶ್ ಜಾವಡೇಕರ್, ಮಾತುಕತೆಯೇ ಪ್ರತಿಭಟನೆಯನ್ನು ತಡೆಯಲು ಮುಖ್ಯವಾದ ಮಾರ್ಗವಾಗಿದೆ ಎಂದು ಹೇಳಿದರು.
''ನಾನು ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಟನೆ ಮಾಡಿಕೊಂಡೆ ಬಂದವನು. ಹಾಗಾಗಿ ನಾವು ಎಲ್ಲರ ಜೊತೆಯೂ ಮಾತನಾಡುತ್ತೇವೆ. ಮಾತುಕತೆ ನಡೆದಲ್ಲಿ ಪ್ರತಿಭಟನೆಯ ಅವಶ್ಯಕತೆಯಿರುವುದಿಲ್ಲ. ಸ್ಮೃತಿ ಇರಾನಿ ಆಡಳಿತಾವಧಿಯಲ್ಲಿ ನಿರಂತರವಾಗಿ ವಿಶ್ವವಿದ್ಯಾಲಯ ಕ್ಯಾಂಪಸ್ ಗಳಲ್ಲಿ ನಡೆದ ಪ್ರತಿಭಟನೆ, ವಿವಾದಗಳನ್ನು ಮತ್ತೆ ನೆನಪಿಸಿದರು.
ಮಾನವ ಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ಮೃತಿ ಇರಾನಿಯವರನ್ನು ಅವರ ಮನೆಯಲ್ಲಿ ನಿನ್ನೆ ಭೇಟಿ ಮಾಡಿದ ನಂತರ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಜಾವಡೇಕರ್, ತಾವು ಇರಾನಿಯವರ ಸಲಹೆ ಪಡೆದು ಅವರ ಉತ್ತಮ ಕೆಲಸಗಳನ್ನು ಮುಂದುವರಿಸುವುದಾಗಿ ಹೇಳಿದರು.
ಸ್ಮೃತಿ ಇರಾನಿಯವರು ದೆಹಲಿಯ ಜವಹರಲಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಗಳನ್ನು ನಿಭಾಯಿಸಿದ ರೀತಿಗೆ ವ್ಯಾಪಕ ಟೀಕೆಗಳು ವಿರೋಧ ಪಕ್ಷಗಳಿಂದ ಮತ್ತು ಶಿಕ್ಷಣ ವಲಯಗಳಿಂದ ಕೇಳಿಬಂದಿದ್ದವು.
ಬಿಜೆಪಿ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ. ಸಿಲೆಬಸ್ ಮತ್ತು ಪಠ್ಯಪುಸ್ತಕಗಳಲ್ಲಿ ಬಲ ಪಂಥೀಯ ಧೋರಣೆಗಳನ್ನು ಹೇರಲಾಗುತ್ತಿದೆ ಎಂಬ ಆಪಾದನೆ ಕೇಳಿಬರುತ್ತಿತ್ತು. 
ಈ ಬಗ್ಗೆ ಮಾತನಾಡಿದ ಪ್ರಕಾಶ್ ಜಾವದೇಕರ್, ಶಿಕ್ಷಣ, ರಾಜಕೀಯ ಪಕ್ಷಗಳ ವಿಷಯವಲ್ಲ, ಶಿಕ್ಷಣ ಎಲ್ಲರಿಗೆ ಸಂಬಂಧಿಸಿದ್ದು. ಬಿಜೆಪಿ ಶಿಕ್ಷಣವನ್ನು ಕೇಸರೀಕರಣಗೊಳಿಸುತ್ತಿದೆ ಎಂಬ ಆಪಾದನೆಯನ್ನು ಒಪ್ಪುವುದಿಲ್ಲ ಎಂದರು.
''ವಿಮೋಚನೆಗೆ ಇರುವ ಪ್ರಮುಖ ಅಸ್ತ್ರ ಶಿಕ್ಷಣ. ಬದಲಾವಣೆಗಿರುವ ಮಾರ್ಗ ಮತ್ತು ಶಿಕ್ಷಣವನ್ನು ಸುಧಾರಿಸಿ ಬದಲಾವಣೆ ತಂದು ಕ್ರಾಂತಿಕಾರಿಗೊಳಿಸಬೇಕು ಎಂದು ಜಾವಡೇಕರ್ ಹೇಳಿದರು. ಪ್ರಧಾನ ಮಂತ್ರಿಗಳು ಶಿಕ್ಷಣದ ಬಗ್ಗೆ ಸರಿಯಾದ ದೂರದೃಷ್ಟಿ ಹೊಂದಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com