ಪಾಕ್ ಜೈಲಲ್ಲಿ ಮುಂಬೈ ವ್ಯಕ್ತಿ, ಬಿಡುಗಡೆಗೆ ಆಗ್ರಹಿಸಿ ಆನ್ ಲೈನ್ ಅಭಿಯಾನ

ಹಲವು ವರ್ಷಗಳಿಂದಲೂ ಪಾಕಿಸ್ತಾನ ಸೆರೆವಾಸದಲ್ಲಿರುವ ಮುಂಬೈ ವ್ಯಕ್ತಿಯ ಬಿಡುಗಡೆಗೆ ಆಗ್ರಹಿಸಿ ಆನ್ ಲೈನ್ ನಲ್ಲಿ ಅಭಿಯಾನ ನಡೆಸಲಾಗುತ್ತಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಹಲವು ವರ್ಷಗಳಿಂದಲೂ ಪಾಕಿಸ್ತಾನ ಸೆರೆವಾಸದಲ್ಲಿರುವ ಮುಂಬೈ ವ್ಯಕ್ತಿಯ ಬಿಡುಗಡೆಗೆ ಆಗ್ರಹಿಸಿ ಆನ್ ಲೈನ್ ನಲ್ಲಿ ಅಭಿಯಾನ ನಡೆಸಲಾಗುತ್ತಿದೆ.

ಈ ಕುರಿತಂತೆ ಆನ್ ಲೈನ್ ನಲ್ಲಿ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆಯಾಗಿದ್ದು, ಪ್ರಕಟಣೆಯಲ್ಲಿ ಮುಂಬೈ ಮೂಲದ ಹಮೀದ್ ಎನ್ ಅನ್ಸಾರಿ ಎಂಬುವವರು ಪಾಕಿಸ್ತಾನದಲ್ಲಿ 4 ವರ್ಷಗಳಿಗಿಂತಲೂ ಅಧಿಕ ವರ್ಷ ಸೆರೆವಾಸ ಅನುಭವಿಸುತ್ತಿದ್ದು, ಈ ವರೆಗೂ ಬಿಡುಗಡೆಯಾಗಿಲ್ಲ ಎಂದು ಹೇಳಲಾಗಿದೆ.

ಎಂಬಿಎ ಮಾಡಿ ಇಂಜಿನಿಯರ್ ಆಗರಿರುವ ಅನ್ಸಾರಿ (31) ಎಂಬುವವರು ಮುಂಬೈನ ನಿವಾಸಿಯಾಗಿದ್ದು, ಉದ್ಯೋಗ ಸಂದರ್ಶನಕ್ಕಾಗಿ ನವೆಂಬರ್ 2012ರಲ್ಲಿ ಅಫ್ಘಾನಿಸ್ತಾನದ ಕಾಬುಲ್ ಗೆ ತೆರಳಿದ್ದರು. ಫೇಸ್ ಬುಕ್ ನಲ್ಲಿ ಪಾಕಿಸ್ತಾನದ ಯುವತಿಯೊಂದಿಗೆ ಸ್ನೇಹದಲ್ಲಿದ್ದರು. ಫೇಸ್ ಬುಕ್ ನಲ್ಲಿ ಚಾಟ್ ಮಾಡುತ್ತಿದ್ದ ಯುವತಿ ಅನ್ಸಾರಿಯವರ ಬಳಿ, ತನ್ನ ಕುಟುಂಬದವರು ವಯಸ್ಸಾದ ವ್ಯಕ್ತಿಯೊಂದಿಗೆ ಬಲವಂತದಿಂದ ಮದುವೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.

ಇದರಂತೆ ಯುವತಿಯನ್ನು ರಕ್ಷಿಸುವ ಸಲುವಾಗಿ ಅನ್ಸಾರಿಯವರು 2012ರ ನವೆಂಬರ್ 12ರಂದು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದರು. ಯುವತಿ ಚಾಟ್ ಮಾಡಿರುವ ದಾಖಲೆಗಳು ಈಗಲೂ ನಮ್ಮ ಬಳಿ ಇದೆ ಎಂದು ಅರ್ಜಿ ಸಲ್ಲಿಸಿರುವ ಪ್ರಸನ್ನ ಚಂದ್ರಶೇಖರ್ ಎಂಬುವವರು ಹೇಳಿಕೊಂಡಿರುವುದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗಡಿ ದಾಟುತ್ತಿದ್ದಂತೆ ಎಲ್ಲರ ಸಂಪರ್ಕ ಕಳೆದುಕೊಂಡಿದ್ದ ಅನ್ಸಾರಿಯನ್ನು ಪಾಕಿಸ್ತಾನದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ನಂತರ ಸೇನಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದರಂತೆ ಅನ್ಸಾರಿಯವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದೇ ವರ್ಷದ ಜನವರಿ ತಿಂಗಳಂದು ಅನ್ಸಾರಿಯವರ ತಾಯಿ ಫೌಸಿಯಾ ಅನ್ಸಾರಿಯವರು ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ದಾಖಲಿಸಿದ್ದರು. 2015ರ ನವೆಂಬರ್ 14 ರಂದು ನನ್ನ ಮಗನಿಗೆ ಮೂರು ವರ್ಷಗಳ ಕಾಲ ಸೆರೆವಾಸ ವಿಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಸೆರೆವಾಸ ಅನುಭವಿಸಿರುವ ಪುತ್ರನಿಗೆ ಪಾಕಿಸ್ತಾನ ನ್ಯಾಯಾಲಯ ಮತ್ತೆ 3 ವರ್ಷಗಳ ಕಾಲ ಜೈಲುವಾಸ ವಿಧಿಸಿದೆ ಎಂದು ಹೇಳಿದ್ದರು. ಅನ್ಸಾರಿಯವರ ತಾಯಿ ಅರ್ಜಿ ಸಲ್ಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮಾಜಿ ಶಾಸಕ ಕೃಷ್ಣ ಹೆಗ್ಡೆಯವರು, ಪೇಶಾವರ ನ್ಯಾಯಾಲಯ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿಚಾರಣೆ ವೇಳೆ ಈಗಾಗಲೇ ಅನ್ಸಾರಿ ಮೂರು ಸೆರೆವಾಸ ಅನುಭವಿಸಿದ್ದು, ಇದನ್ನೇ ಶಿಕ್ಷೆಯಾಗಿ ಪರಿಗಣಿಸಿ ಬಿಡುಗಡೆ ಮಾಡುವಂತೆ ತಿಳಿಸಿದೆ ಎಂದು ಹೇಳಿದ್ದಾರೆ.

ಅನ್ಸಾರಿಯವರು ಈಗಾಗಲೇ 4 ವರ್ಷ ಸೆರೆವಾಸ ಅನುಭವಿಸಿದ್ದು, ಈಗಲೂ ಅವರು ಬಿಡುಗಡೆಗೊಂಡಿಲ್ಲ. ಪ್ರಕರಣದಿಂದ ಅನ್ಸಾರಿಯವರ ಪೋಷಕರಾದ ನೆಹಾಲ್ ಮತ್ತು ಫೌಜಿಯಾ ಅವರು ಸಾಕಷ್ಟು ನೊಂದಿದ್ದಾರೆ. ಮಗನನ್ನು ಬಿಡುಗಡೆಗೊಳಿಸಲು ತಮ್ಮಿಂದ ಸಾಧ್ಯವಾದಷ್ಟು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪ್ರಕರಣ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನ ಸರ್ಕಾರದ ಉನ್ನತ ಅಧಿಕಾರಿಗಳಿಗೂ ಪತ್ರ ಬರೆದಿದ್ದು, ಮಧ್ಯಸ್ಥಿಕೆ ವಹಿಸುವಂತೆ ತಿಳಿಸಿದ್ದಾರೆಂದು ಆನ್ ಲೈನ್ ನಲ್ಲಿ ನಡೆಸಲಾಗುತ್ತಿರುವ ಅಭಿಯಾನದಲ್ಲಿ ಹೇಳಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com