ಬಾಂಗ್ಲಾದೇಶದಲ್ಲಿ ಜಾಕೀರ್ ನಾಯಕ್​ ಪೀಸ್ ಟಿವಿಗೆ ನಿಷೇಧ

ಭಾರತೀಯ ಮೂಲದ ವಿವಾದಾತ್ಮಕ ಧಾರ್ಮಿಕ ಪ್ರವಚನಕಾರ ಜಾಕೀರ್ ನಾಯಕ್​ ಅವರ ಮಾಲೀಕತ್ವದ ‘ಪೀಸ್ ಟಿವಿ’ ವಾಹಿನಿಯ ಪ್ರಸಾರವನ್ನು ಬಾಂಗ್ಲಾದೇಶ ಸರ್ಕಾರ ಭಾನುವಾರ ಅಧಿಕೃತವಾಗಿ ನಿಷೇಧಿಸಿದೆ.
ಜಾಕಿರ್ ನಾಯಕ್ ಮತ್ತು ಪೀಸ್ ಟಿವಿ (ಸಂಗ್ರಹ ಚಿತ್ರ)
ಜಾಕಿರ್ ನಾಯಕ್ ಮತ್ತು ಪೀಸ್ ಟಿವಿ (ಸಂಗ್ರಹ ಚಿತ್ರ)

ಢಾಕಾ: ಭಾರತೀಯ ಮೂಲದ ವಿವಾದಾತ್ಮಕ ಧಾರ್ಮಿಕ ಪ್ರವಚನಕಾರ ಜಾಕೀರ್ ನಾಯಕ್​ ಅವರ ಮಾಲೀಕತ್ವದ ‘ಪೀಸ್ ಟಿವಿ’ ವಾಹಿನಿಯ ಪ್ರಸಾರವನ್ನು ಬಾಂಗ್ಲಾದೇಶ ಸರ್ಕಾರ ಭಾನುವಾರ  ಅಧಿಕೃತವಾಗಿ ನಿಷೇಧಿಸಿದೆ.

ಈ ಹಿಂದೆ ಢಾಕಾದ ರೆಸ್ಟೋರೆಂಟ್ ಮೇಲೆ ನಡೆದ ಉಗ್ರದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಉಗ್ರರಿಗೆ ಜಾಕೀರ್ ನಾಯಕ್ ಮತ್ತು ಅವರ ಪ್ರವಚನಗಳು ಪ್ರೇರಣೆಯಾಗಿದ್ದವು ಎಂಬ ಅಂಶದ  ಆಧಾರದ ಮೇಲೆ ಪೀಸ್ ಟಿವಿ ಪ್ರಸಾರವನ್ನು ಬಾಂಗ್ಲಾದೇಶ ಸರ್ಕಾರ ಭಾನುವಾರದಿಂದ ಅಧಿೃಕೃತವಾಗಿ ನಿಷೇಧಿಸಿದೆ. ಜಾಕೀರ್ ಮಾಡಿದ ಪ್ರಚೋದಕ ಭಾಷಣಗಳು ಢಾಕಾ ದಾಳಿಕೋರರಿಗೆ  ಸ್ಪೂರ್ತಿ ನೀಡಿತ್ತು. ದಾಳಿಕೋರ ಉಗ್ರರ ಪೈಕಿ ಓರ್ವ ಸ್ವತಃ ಈ ವಿಚಾರವನ್ನು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದ. ಅಲ್ಲದೆ ಜಾಕಿರ್ ನಾಯಕ್ ಅವರ ಭಾಷಣೆ ಆಲಿಸುವಂತೆ ಬಾಂಗ್ಲಾ ಮುಸ್ಲಿಂ  ಯುವರಿಗೆ ಸಲಹೆ ನೀಡಿದ್ದ. ಈ ಹಿನ್ನಲೆಯಲ್ಲಿ ಬಾಂಗ್ಲಾ ಸರ್ಕಾರ ಈ ಕ್ರಮ ಕೈಗೊಂಡಿದೆ.

ಬಾಂಗ್ಲಾದೇಶದ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಭಾನುವಾರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂಬೈ ಮೂಲದ ಧಾರ್ಮಿಕ ಪ್ರಚಾರಕನ ‘ಪೀಸ್ ಟಿವಿ  ಬಾಂಗ್ಲಾ’ವನ್ನು ನಿಷೇಧಿಸುವಂತೆ ಸರ್ಕಾರ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾಂಗ್ಲಾದೇಶಕ ಕೈಗಾರಿಕಾ ಸಚಿವ ಆಮೀರ್ ಹುಸೈನ್ ಅಮು  ಹೇಳಿದರು. ಇದಲ್ಲದೆ ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ರಂಜಾನ್ ಪ್ರಾರ್ಥನೆ ಸಂದರ್ಭದಲ್ಲಿ ಆದ ಅಚಾತುರ್ಯ ಮತ್ತೆ ನಡೆಯದಂತೆ ಎಚ್ಚರ ವಹಿಸುವಂತೆ  ಸೈನಿಕರಿಗೆ ಸೂಚಿಸಲಾಗಿದೆ. ಅಂತೆಯೇ ಶುಕ್ರವಾರದ ಪ್ರಾರ್ಥನಾ ಸಭೆಗಳ ಮೇಲೆ ನಿಗಾ ವಹಿಸಲು ಮತ್ತು ಪ್ರಚೋದನಾಕಾರಿ ಭಾಷಣಗಳನ್ನು ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಗಮನ  ಇಡಲು ಕೂಡಾ ಸಭೆಯಲ್ಲಿ ನಿರ್ಧರಲಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಬಾಂಗ್ಲಾ ಸರ್ಕಾರ ಮುಸ್ಲಿಂ ಧಾರ್ಮಿಕ ಮುಖಂಡ ಇಮಾಮ್ ಗಳಿಗೆ ಶಾಂತಿ ಮತ್ತು ಸೌಹಾರ್ಧಯುತವಾದ ನಿಜವಾದ ಇಸ್ಲಾಂ ಧರ್ಮ ಪ್ರಚಾರ ಮಾಡುವಂತೆಯೂ ಮನವಿ  ಮಾಡಿಕೊಂಡಿದೆ.

ಢಾಕಾದ ರೆಸ್ಟೋರೆಂಟ್​ ನಲ್ಲಿ ಜುಲೈ 1ರಂದು ನಡೆದ ಭೀಕರ ಉಗ್ರ ದಾಳಿಯಲ್ಲಿ 22 ಮಂದಿಯನ್ನು ಉಗ್ರಗಾಮಿಗಳು ಕೊಂದಿದ್ದರು. ಉಗ್ರರ ದುಷ್ಕೃತ್ಯದ ಹಿಂದೆ ಭಯೋತ್ಪಾದಕ  ಸಂಘಟನೆಗಳಿದ್ದರೂ, ಉಗ್ರರು ಸಂಘಟನೆ ಸೇರಲು ಅವರಿಗೆ ನಾಯಕ್ ಭಾಷಣವೇ ಸ್ಪೂರ್ತಿ ನೀಡಿತ್ತು ಎಂದು ಭದ್ರತಾ ವರದಿಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com