ನಿರುದ್ಯೋಗಿ ಯುವಕರಿಗೆ ಗಾಳ ಹಾಕುತ್ತಿರುವ ಇಸಿಸ್; ಪ.ಬಂಗಾಳ ಗಡಿಯಲ್ಲಿ ಕಾರ್ಯಾಚರಣೆ

ನಿರುದ್ಯೋಗಿ ಮುಸ್ಲಿಂ ಯುವಕರಿಗೆ ಗಾಳ ಹಾಕುತ್ತಿರುವ ಇಸಿಸ್ ಮತ್ತು ಜಮ್ಮ-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶದ ಉಗ್ರ ಸಂಘಟನೆಗಳು ಇದಕ್ಕಾಗಿ ಪಶ್ಚಿಮ ಬಂಗಾಳದ ಗಡಿಯಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲ್ಕತಾ: ನಿರುದ್ಯೋಗಿ ಮುಸ್ಲಿಂ ಯುವಕರಿಗೆ ಗಾಳ ಹಾಕುತ್ತಿರುವ ಇಸಿಸ್ ಮತ್ತು ಜಮ್ಮ-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶದ ಉಗ್ರ ಸಂಘಟನೆಗಳು ಇದಕ್ಕಾಗಿ ಪಶ್ಚಿಮ ಬಂಗಾಳದ ಗಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

ವಿಧ್ವಂಸಕ ಕೃತ್ಯ, ದಾಳಿ, ತಂತ್ರಗಳನ್ನು ರೂಪಿಸುವ ಸಲುವಾಗಿ ಉಗ್ರ ಸಂಘಟನೆಗಳಾದ ಇಸಿಸ್ ಹಾಗೂ ಜೆಎಂಬಿ ಯೋಜನೆ ರೂಪಿಸಿದ್ದು, ಇದಕ್ಕಾಗಿ ಬಡ ಮುಸ್ಲಿಂ ನಿರುದ್ಯೋಗಿ ಯುವಕರನ್ನು ಗುರಿಯಾಗಿಟ್ಟಿದೆ ಎಂದು ತಿಳಿದುಬಂದಿದೆ.  

ಕೆಲವು ದಿನಗಳ ಹಿಂದಷ್ಟೇ ರಾಷ್ಟ್ರೀಯ ತನಿಖಾ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರ ಗುಂಪೊಂದನ್ನು ಬಂಧಿಸಲಾಗಿತ್ತು. ಶಂಕಿತ ಉಗ್ರರಲ್ಲಿ ಓರ್ವ ಉಗ್ರನ್ನನ್ನು ಮೊಹಮ್ಮದ್ ಮುಸಿರುದ್ದೀನ್ ಎಂದು ಗುರ್ತಿಸಲಾಗಿದ್ದು, ತನಿಖೆ ವೇಳೆ ಈತ ಕೆಲ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.

ಬಡ ನಿರುದ್ಯೋಗ ಮುಸ್ಲಿಂ ಯುವಕರನ್ನು ಗುರಿಯಾಗಿಟ್ಟುಕೊಂಡಿರುವ ಇಸಿಸ್ ಹಾಗೂ ಜೆಎಂಬಿ ಉಗ್ರ ಸಂಘಟನೆಗಳು ಯುವಕರನ್ನು ಸೇರ್ಪಡೆಗೊಳಿಸಿಕೊಳ್ಳಲು ಯೋಜನೆ ರೂಪಿಸಿದೆ. ಇದಕ್ಕಾಗಿ ಬಾಂಗ್ಲಾದೇಶ, ಬುರ್ದ್ವಾನ್, ಮುರ್ಷಿದಾಬಾದ್, ಬಿರ್ಭೂಮ್ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದ್ದಾನೆಂದು ಮೂಲಗಳಿಂದ ತಿಳಿದುಬಂದಿದೆ.

ಯುವಕರ ನೇಮಕಾತಿ ಕುರಿತಂತೆ ಗುಂಪೊಂದನ್ನು ರಚಿಸಲಾಗಿದ್ದು, ಇದಕ್ಕಾಗಿ ಗುಂಪು ತಂತ್ರ ರೂಪಿಸುತ್ತಿದೆ. ನಿರುದ್ಯೋಗಿ ಯುವಕರು ಉಗ್ರ ಸಂಘಟನೆಯ ಪ್ರಮುಖ ಗುರಿಯಾಗಿದ್ದಾರೆ. ಇಸಿಸ್ ಈಗಾಗಲೇ ತನ್ನ ಪ್ರಕ್ರಿಯೆಯನ್ನು ಆರಂಭಿಸಿದ್ದು, ಜೆಎಂಬಿ ಕೂಡ ಶೀಘ್ರದಲ್ಲಿ ತನ್ನ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,

ನೇಮಕಾತಿಯಲ್ಲಿ ಎರಡು ಜಿಲ್ಲೆಗಳಿಗೆ ಒಬ್ಬರಂತೆ ಸೂಪರ್ ವೈಸರ್ ಗಳಿದ್ದು, ಇವರು ವಿದ್ಯಾವಂತರಾಗಿ ನಿರುದ್ಯೋಗಿಗಳಾಗಿರುವ ಯುವಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 16-30 ವರ್ಷದೊಳಗಿನ ಮುಸ್ಲಿಂ ಯುವತಿಯರನ್ನೂ ನೇಮಕ ಮಾಡಿಕೊಳ್ಳಲು ಉಗ್ರ ಸಂಘಟನೆ ನಿರ್ಧರಿಸಿದೆ ಎಂದು ಬಂಧಿತ ಉಗ್ರ ಮಾಹಿತಿ ನೀಡಿದ್ದಾನೆ.

ಮೊದಲ ಹಂತದಲ್ಲಿ ಯುವಕರನ್ನು ಒಂದುಗೂಡಿಸಿ ಸಭೆಯೊಂದನ್ನು ನಡೆಸಲಾಗುತ್ತದೆ. ಸಭೆಯಲ್ಲಿ ಯುವಕರನ್ನು ಮನವೊಲಿಸುವ ಪ್ರಯತ್ನ ಮಾಡಿ, ಸಂಘಟನೆಗೆ ಸೇರ್ಪಡೆಗೊಳ್ಳುವಂತೆ ಮಾಡಲಾಗುತ್ತದೆ. ನಂತರ ಯುವಕರನ್ನು ಆಯಾ ಜಿಲ್ಲೆಯ ತರಭೇತಿ ಶಿಬಿರಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬನ್ನು ಎನ್ ಐಎ ತಂಡ ಮಾರ್ಚ್ ತಿಂಗಳಿನಲ್ಲಿ ದುರ್ಗಾಪುರ್ ಪ್ರದೇಶದಲ್ಲಿ ಬಂಧನಕ್ಕೊಳಪಡಿಸಿತ್ತು.

ಫೆಬ್ರವರಿ ತಿಂಗಳಿನಲ್ಲಿಯೂ ಉತ್ತರ ಪ್ರದೇಶದಲ್ಲಿ ಅಬ್ದುಸ್ ಸಮಿ ಕಾಸ್ಮಿ ಎಂಬ ಶಂಕಿತ ಉಗ್ರನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಈತ ಅಶಿಖ್ ಅಹ್ಮದ್ ಅಲಿಯಾಸ್ ರಾಜ ಎಂಬಾತನ ಹೆಸರನ್ನು ಹೇಳಿಕೊಂಡಿದ್ದ. ಶಂಕಿತ ಉಗ್ರ ನೀಡಿದ ಮಾಹಿತಿಯನ್ವಯ ಅಧಿಕಾರಿಗಳು ಅಶಿಖ್ ಮನೆಗೆ ದಾಳಿ ಮಾಡಿ ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ನಂತರ ಆತನನ್ನು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಈತನ ವಿರುದ್ಧ ಯಾವುದೇ ರೀತಿಯ ಅಪರಾಧ ಪ್ರಕರಣಗಳು ದಾಖಲಾಗದಿರುವುದು ತಿಳಿದುಬಂದಿತ್ತು.

ಯಾವುದೇ ಅಪರಾಧ ಪ್ರಕರಣಗಳಿಲ್ಲದ ಯುವಕರನ್ನು ಹುಡುಕುವುದೂ ಕೂಡ ಉಗ್ರರ ತಂತ್ರವಾಗಿದೆ. ಉಗ್ರರಿಗೆ ವಿದ್ಯಾವಂತ ಯುವಕರು ಬೇಕಾಗಿದ್ದಾರೆ. ಯುವಕರು ಸಿರಿಯಾಗೆ ಬಂದು ಯುದ್ಧ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಉಗ್ರ ಸಂಘಟನೆಗಳು ಬೇಕಿಲ್ಲ. ಆದರೆ, ಅವರಿರುವ ಸ್ಥಳದಲ್ಲೇ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ತಿಳಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಸ್ಥಳೀಯ ಮಹಿಳೆಯರನ್ನು ವಿವಾಹವಾಗಿ ಭಾರತೀಯ ನಾಗರೀಕರಂತೆ ಗುರ್ತಿಸಿಕೊಳ್ಳುವುದು ಕೂಡ ಉಗ್ರರ ತಂತ್ರಗಳಲ್ಲಿ ಒಂದಾಗಿದ್ದು, ಈ ರೀತಿಯ ಬೆಳವಣಿಗೆಗಳು ಹಾಗೂ ಚಟುವಟಿಕೆಗಳು ಅವರ ಹಿಂದಿರುವ ಮುಖವನ್ನು ಬಚ್ಚಿಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com