
ಅಹ್ಮದಾಬಾದ್: ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ. ಸತ್ಯ ಮೇವ ಜಯತೆ (ಸತ್ಯಕ್ಕೆ ಎಂದಿಗೂ ಜಯವಿರುತ್ತದೆ) ಎಂದು ಹೇಳಿ ಜಾಮೀನು ಪಡೆದ ನಂತರ ಹಾರ್ದಿಕ್ ಪಟೇಲ್ ಅವರು ಹೇಳಿಕೊಂಡಿದ್ದಾರೆ.
ಜಾಮೀನು ಮಂಜೂರು ನಂತರ ಗುಜರಾತ್ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿರುವ ಪಟೇಲ್ ಚಳುವಳಿಯ ಮುಖಂಡ ಹಾರ್ದಿಕ್ ಪಟೇಲ್ ಅವರು, ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ನಾನು ಯಾವುದೇ ಕೆಲಸವನ್ನು ಮಾಡಿಲ್ಲ. ಭಾರತ ಸರ್ಕಾರದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಮುಗ್ಧರು ಹಾಗೂ ಬಡಜನರಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಹಾರ್ದಿಕ್ ಬರೆದಿರುವ ಈ ಪತ್ರವನ್ನು ಪರ ವಕೀಲ ಯಶವಂತ ವಾಲಾ ಅವರು ಬಹಿರಂಗಪಡಿಸಿದ್ದಾರೆ. ಪತ್ರದಲ್ಲಿ ನಾನು ತಪ್ಪು ಮಾಡದೇ ಇದ್ದರೂ ನನ್ನನ್ನು ಜೈಲಿಗೆ ಕಳುಹಿಸಲಾಗಿತ್ತು. ಒಂದು ಸತ್ಯವನ್ನು ಹೇಳಲು ಬಯಸುತ್ತೇನೆ. ಮೇಕೆ ಯಾವಾಗಲೂ ತ್ಯಾಗ ಮಾಡುತ್ತದೆಯೇ ವಿನಃ ಸಿಂಹ ಮಾಡುವುದಿಲ್ಲ. ಯಾವುದೇ ಆಯಾಮದಲ್ಲೂ ಹಿಂಸಾಚಾರಕ್ಕೆ ನಾನು ಬೆಂಬಲ ನೀಡಿಲ್ಲ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಯಾವುದೇ ಕೆಲಸವನ್ನು ಈ ಹಿಂದೆ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಬಡಜನರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಕೆಲಸ ಮಾಡಿದ್ದೇನೆ.
ನನ್ನ ಈ ಜೈಲು ವಾಸ ಒಂಬತ್ತು ತಿಂಗಳು ನನ್ನ ತಾಯಿಯ ಗರ್ಭದಲ್ಲಿರುವಂತಹ ಅನುಭವವನ್ನು ನೀಡಿದೆ. ಹುಟ್ಟುವುದಕ್ಕೂ ಮುನ್ನ ನನ್ನ ತಾಯಿ ಗರ್ಭದಲ್ಲಿ 9 ತಿಂಗಳು ಇದ್ದೆ. ಇದೀಗ ಜೈಲಿನಲ್ಲಿ 9 ತಿಂಗಳು ಕಳೆದಿದ್ದೇನೆ. ಒಟ್ಟಾರೆಯಾಗಿ 18 ತಿಂಗಳು ಕಳೆದಿದ್ದೇನೆ. ಈ 18 ತಿಂಗಳು ರಾಜಕೀಯದಲ್ಲಿರುವ ಕೊಳಕನ್ನು ಹೇಗೆ ಹೊರ ತೆಗೆದುಹಾಕಬೇಕೆಂಬುದನ್ನು ಕಲಿತುಕೊಂಡಿದ್ದೇನೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಪಟೇಲ್ ಸಮುದಾಯಕ್ಕೆ ಹಿಂದುಳಿದ ವರ್ಗ (ಒಬಿಸಿ) ಅಡಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಸಮುದಾಯದ ಚಳುವಳಿಯನ್ನು ಹಾರ್ದಿಕ್ ಪಟೇಲ್ ಸಂಘಟಿಸಿದ್ದರು. ಆದರೆ, ಈ ಚಳುವಳಿ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಹಾರ್ದಿಕ್ ಅವರನ್ನು ಬಂಧನಕ್ಕೊಳಪಡಿಸಿ, ರಾಷ್ಟ್ರದ್ರೋಹ ಹಾಗೂ ಇನ್ನಿತರೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಹಾರ್ದಿಕ್ ವಿರುದ್ಧದ ಪ್ರಕರಣಗಳ ಸಂಬಂಧ ನಿನ್ನೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠವು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೆಯೇ ಪಟೇಲ್ ಅವರಿಂದ ಹಿಂಸಾಚಾರಕ್ಕೆ ಪ್ರಚೋದನೆಯಾಗಿದೆ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿತ್ತು. ಅಲ್ಲದೆ. ಹಾರ್ದಿಕ್ ಪಟೇಲ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ಪಟೇಲ್ ಗೆ ಮೆಹ್ಸಾನಕ್ಕೆ 9 ತಿಂಗಳು ಪ್ರವೇಶ ನಿರ್ಬಂಧಿಸಿತ್ತು. ಈ ಮುನ್ನ ರಾಷ್ಟ್ರದ್ರೋಹ ಪ್ರಕರಣದಲ್ಲೂ ಜಾಮೀನು ನೀಡಿದ್ದ ಹೈ ಕೋರ್ಟ್ ಗುಜರಾತ್ ಗೆ 6 ತಿಂಗಳು ಪ್ರವೇಶಿದಂತೆ ನಿರ್ಬಂಧ ಹೇರಿತ್ತು.
Advertisement