
ನವದೆಹಲಿ: ಯುದ್ಧ ಪೀಡತ ಪ್ರದೇಶ ದಕ್ಷಿಣ ಸುಡಾನ್'ನಲ್ಲಿರುವ ಭಾರತೀಯರ ರಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಹೇಳಿದ್ದಾರೆ.
ದಕ್ಷಿಣ ಸುಡಾನ್ ನಲ್ಲಿ ಸರ್ಕಾರದ ಸೇನಾ ಪಡೆಗಳು ಮತ್ತು ಬಂಡುಕೋರರ ನಡುವಿನ ಘರ್ಷಣೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಕುರಿತಂತೆ ಸುಷ್ಮಾ ಸ್ವರಾಜ್ ಅವರು ಅಧಿಕಾರಿಗಳೊಂದಿಗೆ ಇಂದು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ.
ಸಭೆಯಲ್ಲಿ ವಿ.ಕೆ. ಸಿಂಗ್, ಎಂ.ಜೆ. ಅಕ್ಬರ್ ಮತ್ತು ವಿದೇಶಾಂಗಾ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಭಾಗಿಯಾಗಿದ್ದರು. ದಕ್ಷಿಣ ಸುಡಾನ್ ನಲ್ಲಿರು ಸಿಲುಕಿರುವ ಭಾರತೀಯನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡಬೇಕು ಮತ್ತು ಸ್ಥಳಾಂತರದ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿದೆ.
ಸಭೆ ನಂತರ ಮಾತನಾಡಿರುವ ಸುಷ್ಮಾ ಸ್ವರಾಜ್ ಅವರು, ದಕ್ಷಿಣ ಸುಡಾನ್ ನಲ್ಲಿ ಸಿಲುಕಿರುವ ಭಾರತೀಯ ರಕ್ಷಣೆಗೆ ಸರ್ಕಾರ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಹಿಂದಿದ್ದ ಪರಿಸ್ಥಿತಿಗಿಂತ ಇದೀಗ ಸುಡಾನ್ ನಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ.
ಭಾರತೀಯ ರಕ್ಷಣೆ ಸರ್ಕಾರಕ್ಕೆ ಅತೀ ಮುಖ್ಯವಾದದ್ದು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ, ಹಿಂತಿರುಗಿ ಬರಲು ಇಚ್ಛಿಸುತ್ತೀರಾ ಎಂದು ಭಾರತೀಯರನ್ನು ಕೇಳಲಾಗುತ್ತಿದೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ದಕ್ಷಿಣ ಸುಡಾನ್ ನಲ್ಲಿ 600ಕ್ಕೂ ಹೆಚ್ಚು ಭಾರತೀಯರಿದ್ದು, ಸುಡಾನ್ ರಾಜಧಾನಿ ಜುಬಾದಲ್ಲಿ 450 ಭಾರತೀಯರಿದ್ದಾರೆ. ಜುಬಾ ಹೊರವಲಯದಲ್ಲೇ ಹಿಂಸಾಚಾರ ನಡೆಯುತ್ತಿದ್ದು, ಹೊರವಲಯದಲ್ಲೂ 150ಕ್ಕೂ ಹೆಚ್ಚು ಭಾರತೀಯರಿದ್ದಾರೆಂದು ತಿಳಿದುಬಂದಿದೆ.
ದಕ್ಷಿಣ ಸುಡಾನ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿ ಕುರಿತಂತೆ ನಿನ್ನೆಯಷ್ಟೇ ವಿದೇಶಾಂಗ ಸಚಿವಾಲಯದ ಸಲಹೆಗಾರರು ಪ್ರತಿಕ್ರಿಯೆ ನೀಡಿದ್ದರು. ದಕ್ಷಿಣ ಸುಡಾನ್ ನಿಂದ ಭಾರತಕ್ಕೆ ಬರಲು ಇಚ್ಛಿಸುವ ಭಾರತೀಯರು controlroomjuba@gmail.comಗೆ ಮಾಹಿತಿ ನೀಡುವ ಮುಖಾಂತರ ನೋಂದಣಿ ಮಾಡಿಕೊಳ್ಳಬೇಕು. ಭಾರತೀಯರು ಸ್ವಯಂಪ್ರೇರಿತರಾಗಿ ವೈಯಕ್ತಿಕ ವಿವರಗಳನ್ನು ಭಾರತೀಯ ರಾಯಭಾರಿ ಕಚೇರಿಗೆ ನೀಡಬೇಕು. ಭಾರತೀಯರಿಗೆ ಸರ್ಕಾರ ವ್ಯವಸ್ಥೆ ಕಲ್ಪಿಸಿದ್ದು, ನೆರವು ನೀಡಲು ಮುಂದಾಗಿದೆ. ಹೀಗಾಗಿ ನೆರವು ಇಚ್ಛಿಸುವ ಭಾರತೀಯರು +211955589611, +211925502025, +211956942720, +211955318587 ಸಂಪರ್ಕಿಸುವಂತೆ ತಿಳಿಸಿದ್ದರು.
Advertisement