
ಶ್ರೀನಗರ: ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬೆನ್ನಲ್ಲೇ ಕಣಿವೆ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಣ್ಣಗಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಈ ನಡುವೆ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 34ಕ್ಕೇರಿದೆ.
ರಾಜಧಾನಿ ಶ್ರೀನಗರ, ಅನಂತ್ ನಾಗ್, ಗಡಿ ಜಿಲ್ಲೆ ಪುಲ್ವಾಮದಲ್ಲಿಯೂ ಪೊಲೀಸರು ಮತ್ತು ಉದ್ರಿಕ್ತರ ನಡುವಿನ ಸಂಘರ್ಷ ಮುಂದುವರೆದಿದೆ. ಈ ವರೆಗೂ ಹಿಂಸಾಚಾರದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 34ಕ್ಕೇರಿದ್ದು, ಸುಮಾರು 1300ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಅಂತೆಯೇ 300ಕ್ಕೂ ಅಧಿಕ ಸೈನಿಕರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅತ್ತ ಉದ್ರಿಕ್ತ ಪ್ರತಿಭಟನೆ ಮುಂದುವರೆಯುವಂತೆಯೇ ಇತ್ತ ಶ್ರೀನಗರದಲ್ಲಿ ಪೊಲೀಸರು ಪ್ರತ್ಯೇಕತಾವಾದಿ ಮುಖಂಡರನ್ನು ವಿಚಾರಣೆಗೊಳಪಡಿಸಿದ್ದಾರೆ. ಬುರ್ಹಾನ್ ವಾನಿ ಹತ್ಯೆಯನ್ನು ಖಂಡಿಸಿ ಕಳೆದ ಹಲವು ದಿನಗಳಿಂದ ಗೃಹಬಂಧನದಲ್ಲಿದ್ದುಕೊಂಡೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರತ್ಯೇಕತಾವಾದಿ ಮುಖಂಡ ಸೈಯ್ಯದ್ ಗಿಲಾನಿ ಅವರು ಇಂದು ಮನೆಯಿಂದ ಹೊರಗೆ ಬಂದು ಪ್ರತಿಭಟನಾಕಾರರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಶ್ರೀನಗರ ನಿವಾಸದಿಂದ ಆರಂಭವಾದ ಪ್ರತಿಭಟನಾ ಮಾರ್ಚ್ ನಲ್ಲಿ ಪಾಲ್ಗೊಂಡ ಸೈಯ್ಯದ್ ಗಿಲಾನಿ ಅವರು, ಕಾಶ್ಮೀರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಹಿನ್ನಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದರು.
ಬುರ್ಹಾನ್ ವಾನಿ ಕಾಶ್ಮೀರಿ ಹೀರೋ: ಗಿಲಾನಿ
ಈ ವೇಳೆ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಗಿಲಾನಿ, ಉಗ್ರ ಕಮಾಂಡರ್ ಬುರ್ಹಾನ್ ವಾನಿಯನ್ನು ಸ್ವಾತಂತ್ರ್ಯ ಯೋಧ ಎಂದು ಬಣ್ಣಿಸಿದರು. ಅಲ್ಲದೆ ಬುರ್ಹಾನ್ ವಾನಿ ನಿಜವಾಗಿಯೂ ಕಾಶ್ಮೀರಿ ಹಿರೋ ಎಂದು ಬಣ್ಣಿಸಿದರು. "ಬುರ್ಹಾನ್ ವಾನಿ ಓರ್ವ ಯುವ ಸೈನಿಕನಂತೆ ಇದ್ದ, ತನ್ನ ಜನರಿಗಾಗಿ ಹೋರಾಡಿ ಮಡಿದಿದ್ದಾನೆ. ಕಾಶ್ಮೀರಿ ಜನರ ಆತ್ಮಗೌರವಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಾನೆ ಎಂದು ಹೇಳಿದರು.
ಇದೇ ವೇಳೆ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ನಡೆಸುತ್ತಿರುವ ದಾಳಿ ಕುರಿತು ಮಾತನಾಡಿದ ಗಿಲಾನಿ, ಹಿಂಸಾತ್ಮಕ ಪ್ರತಿಭಟನೆ ನಮ್ಮ ಧರ್ಮದ ಸಂಸ್ಕೃತಿ ಅಲ್ಲ. ಪೊಲೀಸರಿಗೆ ಯಾವುದೇ ರೀತಿ ಹಾನಿ ಮಾಡಬೇಡಿ. ಇದು ಇಸ್ಲಾಂ ವಿರುದ್ಧವಾದ ನಡೆ. ಪೊಲೀಸರು ಕೂಡ ನಮ್ಮವರೇ..ನಮ್ಮವರನ್ನು ನಾವೇ ಕೊಲ್ಲುವುದು ಸರಿಯಲ್ಲ ಎಂದು ಹೇಳಿದರು.
Advertisement