

ನವದೆಹಲಿ: ಜು.18 ರಿಂದ ಸಂಸತ್ ನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಜು.17 ರಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಸರ್ವಪಕ್ಷ ಸಭೆ ಕರೆದಿದ್ದಾರೆ.
ಪ್ರಸಕ್ತ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಜಿಎಸ್ ಟಿ ಮಸೂದೆ ಅಂಗೀಕರಿಸಲು ಉದ್ದೇಶಿಸಿದ್ದು, ಈ ಬಗ್ಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಸರ್ವಪಕ್ಷ ಸಭೆಯಲ್ಲಿ ಮಾತನಾಡಲಿದ್ದಾರೆ. ರಾಜ್ಯಸಭೆಯಲ್ಲಿ ಜಿಎಸ್ ಟಿ ಮಸೂದೆ ಅಂಗೀಕಾರಕ್ಕೆ ವಿಪಕ್ಷಗಳ ಸಹಕಾರ ಅಗತ್ಯವಾಗಿರುವುದರಿಂದ ವಿತ್ತ ಸಚಿವ ಅರುಣ್ ಜೇಟ್ಲಿ, ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ ಅವರೊಂದಿಗೆ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರೊಂದಿಗೆ ಅರುಣ್ ಜೇಟ್ಲಿ ಅವರ ಸಭೆ ಉತ್ತಮವಾಗಿ ನಡೆದಿದೆ. ಕಾಂಗ್ರೆಸ್ ನ ಒಂದು ಭಾಗ ಜಿಎಸ್ ಟಿ ಮಸೂದೆ ಪರವಾಗಿದ್ದು, ಜಿಎಸ್ ಟಿ ಮಸೂದೆ ಪ್ರಸಕ್ತ ಅಧಿವೇಶನದಲ್ಲಿ ಅಂಗೀಕಾರ ಪಡೆಯುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಜಿಎಸ್ ಟಿ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಈ ವರೆಗೂ ಎಲ್ಲಿಯೂ ಅಧಿಕೃತ ಹೇಳಿಕೆ ನೀಡಿಲ್ಲ. ಇನ್ನು ಸರ್ಕಾರ ಸಹ ಜಿಎಸ್ ಟಿ ಮಸೂದೆಯಲ್ಲಿ ಕಾಂಗ್ರೆಸ್ ಮುಂದಿಟ್ಟಿರುವ ಕಳವು ಬೇಡಿಕೆಗಳನ್ನು ಈಡೇರಿಸಲು ಸಮ್ಮತಿ ಸೂಚಿಸಿದೆ ಎಂದು ಹೇಳಲಾಗಿದ್ದು ಮಸೂದೆ ಅಂಗೀಕಾರ ದೃಷ್ಠಿಯಿಂದ ಅಧಿವೇಶನ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಇದರೊಂದಿಗೆ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಗಲಭೆ ಪ್ರಕರಣವು ಸಹ ಸಂಸತ್ ಅಧಿವೇಶನದ್ಲಲಿ ಚರ್ಚೆಗೆ ಬರಲಿದೆ.