ನವದೆಹಲಿ: ಅರುಣಾಚಲ ಪ್ರದೇಶ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಆರೋಪ ಮಾಡಿದ ಕಾಂಗ್ರೆಸ್, ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಹೊಂದಿರುವ ಸರ್ಕಾರಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಅದಕ್ಕೂ ಮುನ್ನ ಸದನದಲ್ಲಿ ಹೇಳಿಕೆ ನೀಡಿದ್ದ ಗೃಹ ಸಚಿವ ರಾಜನಾಥ್ ಸಿಂಗ್, ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿನ ವಿವಾದಾತ್ಮಕ ಬೆಳವಣಿಗೆಗೆ ಕಾಂಗ್ರೆಸ್ ನ ಆಂತರಿಕ ಬಿಕ್ಕಟ್ಟು ಕಾರಣ ಎಂದು ಹೇಳಿದ್ದರು. ದೋಣಿಯಲ್ಲಿ ತೂತು ಇದ್ದರೆ ಅದು, ತೇಲಲು ಸಾಧ್ಯವಿಲ್ಲ, ಮುಳುಗಲೇಬೇಕು ಎಂದು ಹೇಳಿದ್ದರು.
ಗೃಹ ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಒಂದೆಡೆ ಮೋದಿ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನವನ್ನು ಆಚರಿಸುತ್ತಿದೆ. ಇನ್ನೊಂದೆಡೆ ಜನಪ್ರಿಯ ಸರ್ಕಾರಗಳನ್ನು ಉರುಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ ಎಂದು ಆಪಾದಿಸಿದರು.
ನಿಮ್ಮ ಕಾಂಗ್ರೆಸ್ ಮುಕ್ತ ಘೋಷಣೆಯನ್ನು ಹೇಗಾದರೂ ಕಾರ್ಯರೂಪಕ್ಕೆ ತರಬೇಕೆಂದು ನೀವು ನಿರ್ಧರಿಸಿದ್ದೀರಿ. ನಿಮಗೆ ಅವಕಾಶ ಸಿಕ್ಕಿದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳನ್ನು ಅಸ್ಥಿರಗೊಳಿಸಿ ನಿಮ್ಮ ಪಕ್ಷದ ಸರ್ಕಾರ ಬರಬೇಕು ಎಂದು ಹವಣಿಸುತ್ತೀರಿ. ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಅದನ್ನು ಮಾಡಿದ್ದೀರಿ, ಮಣಿಪುರ ಮತ್ತು ಹಿಮಾಚಲ ಪ್ರದೇಶದಲ್ಲಿ ಕೂಡ ಅದೇ ಪರಿಸ್ಥಿತಿ ತರಬೇಕು ಎಂದು ಪ್ರಯತ್ನಿಸುತ್ತೀರಿ. ಇದು ದೇಶದ ಜನತೆಯ ದೃಷ್ಟಿಯಿಂದ ಮತ್ತು ಸಂವಿಧಾನ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಖರ್ಗೆ ಲೋಕಸಭೆಯಲ್ಲಿ ಹೇಳಿದರು.
ಇದಕ್ಕೆ ಉತ್ತರಿಸಿದ ರಾಜನಾಥ್ ಸಿಂಗ್, ತಮ್ಮದೇ ಪಕ್ಷದ ಶಾಸಕರ ವಿರೋಧದಿಂದಾಗಿ ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದುಹೋಯಿತು. ಸರ್ಕಾರ ಉರುಳಿಸುವ ಹಳೆಯ ಚಾಳಿ ಏನಾದರೂ ಇದ್ದರೆ ಅದು ಕಾಂಗ್ರೆಸ್ ಗೆ. ಕಾಂಗ್ರೆಸ್ ಸರ್ಕಾರ ಈ ಹಿಂದೆ ರಾಜ್ಯಗಳಲ್ಲಿನ ಸರ್ಕಾರಗಳನ್ನು 105 ಬಾರಿ ಉರುಳಿಸಿದೆ ಎಂದರು.
ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳಲ್ಲಿನ ರಾಜಕೀಯ ಬಿಕ್ಕಟ್ಟು ದುರದೃಷ್ಟಕರ. ಜನರಿಂದ ಆಯ್ಕೆಗೊಂಡ ಸರ್ಕಾರವನ್ನು ಉರುಳಿಸುವುದು ಆರೋಗ್ಯಕರ ಪ್ರಜಾಪ್ರಭುತ್ವವಲ್ಲ. ಬಿಜೆಪಿ ಇದರಲ್ಲಿ ಏನೂ ಹಸ್ತಕ್ಷೇಪ ಮಾಡಿಲ್ಲ. ಇದು ಕಾಂಗ್ರೆಸ್ ನ ಆಂತರಿಕ ಜಗಳದಿಂದಾಗಿ ಆದ ಬೆಳವಣಿಗೆ. 9 ಮಂದಿ ಕಾಂಗ್ರೆಸ್ ಶಾಸಕರು ಉತ್ತರಾಖಂಡ ವಿಧಾನಸಭೆಯಲ್ಲಿ ಅವರ ಸರ್ಕಾರವನ್ನು ವಿರೋಧಿಸಿದರು. ಅರುಣಾಚಲ ಪ್ರದೇಶದಲ್ಲಿ ಮೂವರಲ್ಲಿ ಇಬ್ಬರು ಸೋತರು. ನಿಮ್ಮ ದೋಣಿಯಲ್ಲಿ ತೂತು ಇದ್ದರೆ, ನೀರಿನ ಮೇಲೆ ಇಟ್ಟರೆ ಮುಳುಗುತ್ತದೆ, ಅದಕ್ಕೆ ನೀರನ್ನು ಯಾಕೆ ಆರೋಪಿಸುತ್ತೀರಿ ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದರು.
ಇದಕ್ಕೆ ಅಸಮಾಧಾನಗೊಂಡ ಕಾಂಗ್ರೆಸ್ ಸಂಸದರು ಸದನದಿಂದ ಹೊರನಡೆದ ಪ್ರಸಂಗ ನಡೆಯಿತು.