ನವದೆಹಲಿ: ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಕೇಂದ್ರ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿ ಬಿ.ಕೆ.ಬನ್ಸಲ್ ಅವರಿಗೆ ಆತ್ಮಹತ್ಯೆಗೆ ಶರಣಾದ ಅವರ ಪತ್ನಿ ಹಾಗೂ ಪುತ್ರಿಯ ಅಂತ್ಯ ಸಂಸ್ಕಾರದಲ್ಲಿ ಭಾವಹಿಸಲು ಸಿಬಿಐ ವಿಶೇಷ ಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಬನ್ಸಲ್ ಗೆ ಜುಲೈ 22ರವರೆಗೆ ಜಾಮೀನು ನೀಡಿದ ಸಿಬಿಐ ವಿಶೇಷ ನ್ಯಾಯಾಧೀಶ ಗುರುದೀಪ್ ಸಿಂಗ್ ಅವರು, ಇಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವ ಅಗತ್ಯ ಇದೆಯೇ ಎಂಬುದರ ಬಗ್ಗೆ ತನಿಖಾ ಸಂಸ್ಥೆ ಯೋಚಿಸಬೇಕಿದೆ ಎಂದು ಹೇಳಿದ್ದಾರೆ.
'ಇದು ಕೊಲೆಯಂತಹ ಸಾಂಪ್ರದಾಯಿಕ ಅಪರಾಧ ಅಲ್ಲ. ಇಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವ ಅಗತ್ಯ ಇರುವುದಿಲ್ಲ. ಏಕೆಂದರೆ ಸಾಕ್ಷ್ಯಾಧಾರಗಳ ಹೆಚ್ಚುಕಮ್ಮಿ ದಾಖಲೆಗಳ ರೂಪದಲ್ಲಿರುತ್ತವೆ' ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.
ಕಾರ್ಪೋರೇಟ್ ವ್ಯವಹಾರಗಳ ಮಹಾ ನಿರ್ದೇಶಕರಾಗಿದ್ದ ಬನ್ಸಲ್ ಬಂಧನದಿಂದ ನೊಂದ ಪತ್ನಿ ಸತ್ಯಬಾಲ(58) ಹಾಗೂ ಪುತ್ರಿ ನೇಹಾ ಅವರು ನಿನ್ನೆ ದೆಹಲಿಯ ಮಧು ವಿಹಾರ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು.