ಲಖನೌ: ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ ಅವರು ತಮ್ಮ ವಿರುದ್ಧ ಸ್ಥಳೀಯ ಕೋರ್ಟ್ ಹೊರಡಿಸಿರುವ ಜಾಮೀನು ರಹಿತ ಬಂಧನ ವಾರಂಟ್ ಗೆ ತಡೆ ಕೋರಿ ಅಲಹಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಬಂಧನ ವಾರಂಟ್ ಗೆ ತಡೆ ಕೋರಿ ದಯಾಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಸ್ವೀಕರಿಸಿದ್ದು, ಜುಲೈ 28ಕ್ಕೆ ವಿಚಾರಣೆ ನಿಗದಿಪಡಿಸಿದೆ.
ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ದಯಾಶಂಕರ್ ಅವರ ವಿರುದ್ಧ ಸೋಮವಾರ ಲಖನೌನ ಮುಖ್ಯ ನ್ಯಾಯಿಕ ದಂಡಾಧಿಕಾರಿ(ಚೀಫ್ ಜ್ಯುಡಿಸಿಯಲ್ ಮ್ಯಾಜಿಸ್ಟ್ರೇಟ್) ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದರು.
ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ್ದ ದಯಾಶಂಕರ್ ಅವರು, ಅವರು ಒಬ್ಬ ವೇಶ್ಯೆಗಿಂತಲೂ ಕಡೆ ಎಂದು ಹೇಳಿದ್ದರು. ಈ ಸಂಬಂಧ ಬಿಜೆಪಿ ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿತ್ತು. ಅಲ್ಲದೆ ಬಿಎಸ್ಪಿ ಅವರ ವಿರುದ್ಧ ಎಫ್ಐಆರ್ ಸಹ ದಾಖಲಿಸಿತ್ತು.