ಮಥುರಾ: ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ರಿಕ್ತ ಜನರ ಗುಂಪು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ವೇಳೆ ಮೃತಪಟ್ಟ ಇಬ್ಬರು ಪೊಲೀಸರ ಕುಟುಂಬಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ರು.20 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಬೆಂಬಲಿಗರು ಎಂದು ಹೇಳಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಉದ್ರಿಕ್ತರ ಗುಂಪೊಂದು ನೇರ ಪೊಲೀಸರ ಮೇಲೆ ಗುಂಡಿ ದಾಳಿ ನಡೆಸಿದ್ದಾರೆ.
ಈ ವೇಳೆ ಕಾರ್ಯಾಚರಣೆ ನಿರತ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದ ಮತ್ತೋರ್ವ ಪೊಲೀಸ್ ಕಾನ್ಸ್ ಟೇಬಲ್ ಕೂಡ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘರ್ಷಣೆ ಸ್ಥಳದಿಂದ ದೇಶ ನಿರ್ಮಿತ ಪಿಸ್ತೂಲು, ರೈಫಲ್, ಮತ್ತು ಕ್ಯಾಟ್ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಂತೆ ಪೊಲೀಸರಿಗೆ ಸೂಚಿಸಿರುವ ಸಿಎಂ ಅಖಿಲೇಶ್ ಯಾದವ್ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.