ಮಥುರಾ ಘರ್ಷಣೆ; 40 ಮಂದಿಯ ಬಂಧನ, 200 ಜನರ ವಿಚಾರಣೆ

ಗುರುವಾರ ಅಕ್ರಮ ಭೂಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಘರ್ಷಣೆಯಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಈ ವರೆಗೂ ಸುಮಾರು 200 ಮಂದಿಯನ್ನು ಮಥುರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ...
ಮಥುರಾದಲ್ಲಿ ಘರ್ಷಣೆ (ಸಂಗ್ರಹ ಚಿತ್ರ)
ಮಥುರಾದಲ್ಲಿ ಘರ್ಷಣೆ (ಸಂಗ್ರಹ ಚಿತ್ರ)

ಮಥುರಾ: ಗುರುವಾರ ಅಕ್ರಮ ಭೂಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಘರ್ಷಣೆಯಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಈ ವರೆಗೂ ಸುಮಾರು 200 ಮಂದಿಯನ್ನು  ಮಥುರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಮ್ಮನ್ನು ತಾವು ಸುಭಾಷ್ ಚಂದ್ರ ಬೋಸ್ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿದ್ದ ಅಜಾದ್ ಭಾರತ್ ವಿಧಿಕ್ ವೈಚಾರಿಕ್ ಕ್ರಾಂತಿ ಸಂತ್ಯಾಗ್ರಹಿ ಸಂಘಟನೆಯ ಸುಮಾರು 3, 500 ಮಂದಿ  ಕಾರ್ಯಕರ್ತರು ಅಕ್ರಮವಾಗಿ ಜವಾಹರ್ ಬಾಘ್ ನಲ್ಲಿ ನಿವಾಸಗಳನ್ನು ನಿರ್ಮಿಸಿಕೊಂಡು ಭಾರತದ ರುಪಾಯಿಯನ್ನು ನಿಷೇಧಿಸಿ ತಮ್ಮದೇ ಆದ ಅಜಾದ್ ಹಿಂದ್ ಫೌಜ್ ಕರೆನ್ಸಿಯನ್ನು ಜಾರಿಗೆ  ತಂದಿದ್ದರು. ಅಲ್ಲದೆ ಭಾರತ ಸಂವಿಧಾನದಲ್ಲಿ ಬದಲಾವಣೆಗೆ ಆಗ್ರಹಿಸಿದ್ದ ಇವರು ರಾಷ್ಟ್ರಪತಿ ಹಾಗೂ ಪ್ರಧಾನಿ ಹುದ್ದೆಯನ್ನು ರದ್ದುಗೊಳಿಸ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರು.

ಈ ಸಂಘಟನೆಯ ವಿರುದ್ಧ ಸ್ಥಳೀಯ ಜಿಲ್ಲಾಡಳಿತ ಒತ್ತವರಿ ತೆರವು ಗೊಳಿಸುವಂತೆ ಆದೇಶ ನೀಡಿತ್ತು. ಅದರಂತೆ ನಿನ್ನೆ ಪೊಲೀಸರು ಭೂಒತ್ತುವರಿ ತೆರುವು ಕಾರ್ಯಾಚರಣೆಗೆ ಮುಂದಾದಾಗ ಈ  ಘರ್ಷಣೆ ಸಂಭವಿಸಿದ್ದು, ಮೂಲಗಳ ಪ್ರಕಾರ ಘರ್ಷಣೆಯಲ್ಲಿ ಈ ವರೆಗೂ ಮೃತಪಟ್ಟವರ ಸಂಖ್ಯೆ 21ಕ್ಕೇರಿದೆ. ಈ ಸಂಬಂಧ ಈಗಾಗಲೇ 40 ಮಂದಿಯನ್ನು ಬಂಧಿಸಿರುವ ಪೊಲೀಸರು 200  ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಸ್ತುತ ಘಟನಾ ಸ್ಥಳದಲ್ಲಿ ಉದ್ರಿಕ್ತ ವಾತಾವರಣವಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್  ಜಾರಿಗೊಳಿಸಲಾಗಿದ್ದು, ತುರ್ತ ಪ್ರಹಾರದಳ, ಸಿಆರ್ ಪಿಎಫ್ ಯೋಧರು ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದಾರೆ. ಇನ್ನು ಅಶ್ರುವಾಯು ದಳ ಹಾಗೂ ಜಲಫಿರಂಗಿಗಳನ್ನು ಕೂಡ ಸ್ಥಳದಲ್ಲೇ  ಉಳಿಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com