ಮೀಸಲಾತಿಗೆ ಆಗ್ರಹಿಸಿ ಜಾಟ್ ಸಮುದಾಯದ ಮುಷ್ಕರ ಆರಂಭ

ಸರ್ಕಾರಿ ಮೀಸಲಾತಿಗೆ ಆಗ್ರಹಿಸಿ ಮತ್ತೆ ಭಾನುವಾರದಿಂದ ಜಾಟ್ ಸಮುದಾಯದ ವತಿಯಿಂದ ಮುಷ್ಕರ ಆರಂಭವಾಗಿದ್ದು, ಈ ಹಿಂದಿನ ಘರ್ಷಣೆಗಳಿಂದ ಎಚ್ಚೆತ್ತುಕೊಂಡಿರುವ ಹರ್ಯಾಣ ಸರ್ಕಾರ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಣೆ ಮಾಡಿದೆ...
ಜಾಟ್ ಸಮುದಾಯದ ಪ್ರತಿಭಟನೆ (ಸಂಗ್ರಹ ಚಿತ್ರ)
ಜಾಟ್ ಸಮುದಾಯದ ಪ್ರತಿಭಟನೆ (ಸಂಗ್ರಹ ಚಿತ್ರ)

ಚಂಡೀಘಡ: ಸರ್ಕಾರಿ ಮೀಸಲಾತಿಗೆ ಆಗ್ರಹಿಸಿ ಮತ್ತೆ ಭಾನುವಾರದಿಂದ ಜಾಟ್ ಸಮುದಾಯದ ವತಿಯಿಂದ ಮುಷ್ಕರ ಆರಂಭವಾಗಿದ್ದು, ಈ ಹಿಂದಿನ ಘರ್ಷಣೆಗಳಿಂದ ಎಚ್ಚೆತ್ತುಕೊಂಡಿರುವ  ಹರ್ಯಾಣ ಸರ್ಕಾರ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಣೆ ಮಾಡಿದೆ.

ಜಾಟ್ ಸಮುದಾಯದ ಮುಷ್ಕರದಿಂದ ಕಾಪ್ ಪಂಚಾಯಿತಿ ದೂರುವುಳಿದಿದ್ದು, ಕಾಪ್ ಪಂಚಾಯಿತ್ ಗಳ ಬೆಂಬಲವಿಲ್ಲದೆಯೇ ಆಲ್ ಇಂಡಿಯಾ ಜಾಟ್ ಆರಕ್ಷಣ್ ಸಂಘರ್ಷ್ ಸಮಿತಿ (ಎಐಜೆಎಸ್  ಎಸ್) ಮುಷ್ಕರಕ್ಕೆ ಕರೆ ನೀಡಿದೆ. ಜಾಟ್ ಸಮುದಾಯದ ಪ್ರತಿಭಟನೆ ವೇಳೆ ಹಿಂಸಾಚಾರ ಸಂಭವಿಸುವ ಸಾಧ್ಯತೆಗಳಿರುವುದರಿಂದ ಹರ್ಯಾಣ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ  ಮಾಡಲಾಗಿತ್ತು, ಮುಂಜಾಗ್ರತಾ ಕ್ರಮವಾಗಿ 48 ಪ್ಯಾರಾಮಿಲಿಟರಿ ಪಡೆಗಳನ್ನು, ತುರ್ತು ಪ್ರಹಾರ ದಳಗಳನ್ನು. ಜಲಫಿರಂಗಿ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಹರ್ಯಾಣ ಗೃಹ ಇಲಾಖೆಯ ಉಪ ಕಾರ್ಯದರ್ಶಿ ರಾಮ್ ನಿವಾಸ್ ಅವರು, "ಜಾಟ್ ಸಮುದಾಯ ಕರೆ ನೀಡಿರುವ ಮುಷ್ಕರದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಭದ್ರತೆ  ತೀವ್ರಗೊಳಿಸಲಾಗಿದೆ. ಈಗಾಗಲೇ ರಾಜ್ಯದ ಹಲವು ಸೂಕ್ಷ್ಮ ಪ್ರದೇಶಗಳಿಗೆ 48 ಪ್ಯಾರಾಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಇನ್ನು 15 ಪ್ಯಾರಾಮಿಲಿಟರಿ ಪಡೆಗಳನ್ನು ನಿಯೋಜಿಸುವಂತೆ  ಕೇಂದ್ರ ಸರ್ಕಾರ ಬಳಿ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹರ್ಯಾಣದಲ್ಲಿ ಇಂಟರ್ ನೆಟ್ ಸೇವೆ ತಾತ್ಕಾಲಿಕ ಸ್ಥಗಿತ
ಇದೇ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಕಾರಣದಿಂದಾಗಿ ಹರ್ಯಾಣದಾದ್ಯಂತ ತಾತ್ಕಾಲಿಕವಾಗಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹರ್ಯಾಣದ ಸೋನೆಪತ್ ನಗರದಲ್ಲಿ ನಿನ್ನೆಯಿಂದಲೇ ಅಂತರ್ಜಾಲ ಸೇವೆ ಸ್ಥಗಿತಗೊಂಡಿದ್ದು, ಬಲ್ಕ್ ಎಸ್ ಎಂಎಸ್ ಸೇವೆಯನ್ನು ಕೂಡ ಸೆಕ್ಷನ್ 144ನ ಅಡಿಯಲ್ಲಿ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಮುಂದಿನ  ಆದೇಶದವರೆಗೂ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಜಾಟ್ ಸಮುದಾಯದ ಪ್ರತಿಭಟನೆ ವೇಳೆ ವ್ಯಾಪಕ ಹಿಂಸಾಚಾರವಾಗಿತ್ತು. ಅಲ್ಲದೆ ಕೋಟ್ಯಂತರ ರುಪಾಯಿ ಸರ್ಕಾರಿ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಈ  ಹಿನ್ನಲೆಯಲ್ಲಿ ಈ ಭಾರಿಯ ಪ್ರತಿಭಟನೆ ವೇಳೆ ಹರ್ಯಾಣ ಪೊಲೀಸರು ವ್ಯಾಪಕ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com