
ಲಖನೌ: 29 ಜನರ ಧಾರುಣ ಸಾವಿಗೆ ಕಾರಣವಾಗಿದ್ದ ಮಥುರಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧೀಕ್ಷಕರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಜವಾಹರ್ ಭಾಗ್ ಕ್ರಾಂತಿಕಾರಿಗಳು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಜಾಗವನ್ನು ತೆರವುಗೊಳಿಸುವಲ್ಲಿ ವಿಫಲರಾದ ಪೊಲೀಸರ ಮೇಲೆ ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಒತ್ತಡವಿತ್ತು ಎಂಬ ಬಿಜೆಪಿ ಆರೋಪದ ಹೊರತಾಗಿಯೂ ಇಂದು ಸಿಎಂ ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ಕುಮಾರ್ ಮತ್ತು ಹಿರಿಯ ಪೊಲೀಸ್ ಅಧೀಕ್ಷಕ ರಾಕೇಶ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಿ ಇಂದು ಆದೇಶ ಹೊರಡಿಸಿದೆ.
ರಾಕೇಶ್ ಕುಮಾರ್ ಸಿಂಗ್ ಅವರ ಬದಲಿಗೆ ಎಸ್ ಪಿ ಜಲೌನ್ ರನ್ನು ಸರ್ಕಾರ ನೇಮಕ ಮಾಡಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಥಾನಕ್ಕೆ ಇನ್ನಷ್ಟೇ ಆಯ್ಕೆ ನಡೆಸಬೇಕಿದೆ ಎಂದು ಸರ್ಕಾರದ ವಕ್ತಾರ ಬಬ್ಲೂ ಕುಮಾರ್ ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಉತ್ತರ ಪ್ರದೇಶ ಸರ್ಕಾರ
ಇನ್ನು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಮಂದಿಯ ಸಾವಿಗೆ ಕಾರಣವಾದ ಜವಾಹರ್ ಭಾಗ್ ಗಲಭೆ ಪ್ರಕರಣ ಸಂಬಂಧ ಕೇಂದ್ರ ಗೃಹ ಇಲಾಖೆಗೆ ಉತ್ತರ ಪ್ರದೇಶ ಸರ್ಕಾರ ತನ್ನ ವರದಿ ನೀಡಿದೆ. ವರದಿಯಲ್ಲಿ ಜವಾಹರ್ ಭಾಗ್ ಕ್ರಾಂತಿಕಾರಿಗಳು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಜಾಗವನ್ನು ತೆರವುಗೊಳಿಸುವಲ್ಲಿ ವಿಫಲರಾದ ಪೊಲೀಸರ ಮೇಲೆ ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಒತ್ತಡವಿತ್ತು ಎಂಬ ಬಿಜೆಪಿ ಆರೋಪವನ್ನು ಸಿಎಂ ಅಖಿಲೇಶ್ ಯಾದವ್ ಸರ್ಕಾರ ತಳ್ಳಿ ಹಾಕಿದ್ದು, ಸ್ಥಳೀಯ ಜಿಲ್ಲಾಡಳಿತದ ವೈಫಲ್ಯದಿಂದಾಗಿ ಗಲಭೆ ಸಂಭವಿಸಿದೆ ಎಂದು ಸರ್ಕಾರ ವರದಿಯಲ್ಲಿ ಹೇಳಿದೆ.
ರಾಮ್ ವೃಕ್ಷ್ ಯಾದವ್ ನೇತೃತ್ವದ ಕ್ರಾಂತಿಕಾರಿಗಳು ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳುವ ಮೊದಲೇ ಪೊಲೀಸರನ್ನು ಜವಾಹರ್ ಭಾಗ್ ಗೆ ರವಾನಿಸಲಾಗಿತ್ತು ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.
Advertisement