ಅಖಿಲೇಶ್ ಸರ್ಕಾರ ಗುಪ್ತಚರ ವರದಿ ನಿರ್ಲಕ್ಷಿಸಿದ್ದೇ ಮಥುರಾ ಗಲಭೆಗೆ ಕಾರಣ?

ಬರೊಬ್ಬರಿ 29 ಜನರ ಮಾರಣ ಹೋಮ ನಡೆದ ಮಥುರಾ ಹಿಂಸಾಚಾರ ಪ್ರಕರಣಕ್ಕೆ ಅಖಿಲೇಶ್ ಸರ್ಕಾರದ ಗುಪ್ತಚರ ವರದಿಯ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುತ್ತಿವೆ ಮೂಲಗಳು..
ಸಿಎಂ ಅಖಿಲೇಶ್ ಯಾದವ್ ಮತ್ತು ಮಥುರಾ ಗಲಭೆ (ಸಂಗ್ರಹ ಚಿತ್ರ)
ಸಿಎಂ ಅಖಿಲೇಶ್ ಯಾದವ್ ಮತ್ತು ಮಥುರಾ ಗಲಭೆ (ಸಂಗ್ರಹ ಚಿತ್ರ)

ಮಥುರಾ: ಬರೊಬ್ಬರಿ 29 ಜನರ ಮಾರಣ ಹೋಮ ನಡೆದ ಮಥುರಾ ಹಿಂಸಾಚಾರ ಪ್ರಕರಣಕ್ಕೆ ಅಖಿಲೇಶ್ ಸರ್ಕಾರದ ಗುಪ್ತಚರ ವರದಿಯ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುತ್ತಿವೆ ಮೂಲಗಳು.

ಮಥುರಾ ಗಲಭೆ ಕುರಿತು ಸರ್ಕಾರದ ವರದಿ ಬಹಿರಂಗವಾದ ಬೆನ್ನಲ್ಲೇ ಅಖಿಲೇಶ್ ಯಾದವ್ ನೇತೃತ್ವ ಉತ್ತರ ಪ್ರದೇಶ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತೊಂದು ವರದಿ  ಬಿಡುಗಡೆಯಾಗಿದ್ದು, ಗುಪ್ತಚರ ದಳ ನೀಡಿದ ಸಾಲು-ಸಾಲು ವರದಿಗಳನ್ನು ಸರ್ಕಾರ ನಿರ್ಲಕ್ಷಿಸಿದ್ದೇ ಮಥುರಾ ಗಲಭೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಗಲಭೆ ನಡೆದ ಜವಾಹರ್ ಭಾಗ್ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಸುಭಾಷ್‌ ಸೇನೆಯ 3,000 ಕ್ರಾಂತಿಕಾರಿಗಳು ಲೈಸನ್ಸ್‌ ಇರುವ ಮತ್ತು ಲೈಸನ್ಸ್‌ ಇಲ್ಲದ ಅಪಾರ  ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ನೀಡಿತ್ತಂತೆ. ಈ ಬಗ್ಗೆ ಸರ್ಕಾರಕ್ಕೆ ಸಾಲು-ಸಾಲು ವರದಿ ನೀಡಿದ್ದರೂ ಸಿಎಂ ಅಖಿಲೇಶ್ ಯಾದವ್ ಮಾತ್ರ  ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿದುಬಂದಿದೆ. ಜವಾಹರ್ ಭಾಗ್ ಕ್ರಾಂತಿಕಾರಿಗಳ ಕುರಿತು ಸುಮಾರು 40 ವರದಿಗಳು ಗುಪ್ತಚರ ಇಲಾಖೆಯಿಂದ ಸಿಎಂ ಅಖಿಲೇಶ್ ಯಾದವ್  ಅವರ ಕಚೇರಿಗೆ ತಲುಪಿದ್ದು, ಈ ಪೈಕಿ ಒಂದಕ್ಕೂ ಅಖಿಲೇಶ್ ಯಾದವ್ ಅವರು ಕ್ರಮ ಕೈಗೊಂಡಿರಲಿಲ್ಲ. ಮಾತ್ರವಲ್ಲದೆ ಸುಭಾಷ್‌ ಸೇನೆಯ ಕ್ರಾಂತಿಕಾರಿಗಳು ಶಸ್ತ್ರಾಸ್ತ್ರ ತರಬೇತಿ ಪಡೆಯುವ  ವಿಡಿಯೋ ದೃಶ್ಯಾವಳಿಗಳನ್ನು ಕೂಡ ಅಖಿಲೇಶ್‌ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿತ್ತು ಎಂಬ ವಿಷಯ ಕೂಡ ಈಗ ಬಹಿರಂಗವಾಗಿದೆ.

ಗುಪ್ತಚರ ವರದಿ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಮಥುರಾ ಗಲಭೆಯೇ ಸಂಭವಿಸುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಪರಿಣಾಮವಾಗಿ ಜವಾಹರ್‌ ಬಾಗ್‌ ತೆರವು  ಕಾರ್ಯಾಚರಣೆಯ ವೇಳೆ "ಸತ್ಯಾಗ್ರಹಿಗಳು' ತಮ್ಮ ಕೈಯಲ್ಲಿದ್ದ ಈ ಅಕ್ರಮ ಶಸ್ತ್ರಾಸ್ತ್ರಗಳನ್ನು ಪೊಲೀಸರ ವಿರುದ್ಧ ಬಳಸಿ ದಾಳಿ ಮಾಡಿದ್ದರು. ದಾಳಿ ತಡೆಯಲು ಹೋದ ಪೊಲೀಸರು ಅನ್ಯ  ಮಾರ್ಗವಿಲ್ಲದೇ ಪೊಲೀಸರು ಗುಂಡು ಹಾರಿಸಿದಾಗ ಪೊಲೀಸರು ಸೇರಿದಂತೆ 29 ಮಂದಿ ಸಾವನ್ನಪ್ಪಿದ್ದ ಸತ್ಯಾಂಶ ಈಗ ಬಹಿರಂಗವಾಗಿದೆ.

ಇದಿಷ್ಟೇ ಅಲ್ಲ ಜವಾಹರ್‌ ಬಾಗ್‌ ಅತಿಕ್ರಮಣವನ್ನು ತೆರವುಗೊಳಿಸುವುದಕ್ಕೆ ತಮಗೆ ಹೆಚ್ಚುವರಿ ಪೊಲೀಸ್‌ ಪಡೆ ಬೇಕು ಎಂಬ ಜಿಲ್ಲಾಡಳಿತದ ಕೋರಿಕೆಯನ್ನು ಕೂಡ ಅಖಿಲೇಶ್‌ ಸರ್ಕಾರ  ಕಡೆಗಣಿಸಿ ಯಾವುದೇ ಹೆಚ್ಚುವರಿ ಪೊಲೀಸ್‌ ಬಲ ನೀಡಲಿಲ್ಲ. ಪರಿಣಾಮವಾಗಿ ಓರ್ವ ಪೊಲೀಸ್‌ ಸುಪರಿಂಟೆಂಡೆಂಟ್‌ ಮತ್ತು ಓರ್ವ ಠಾಣಾಧಿಕಾರಿ ಸಹಿತವಾಗಿ 29 ಮಂದಿ ಹಿಂಸೆಯ ಈ  ದಳ್ಳುರಿಗೆ ಬಲಿಯಾದರು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com