ಮಾಲೀಕನ ಜೀವ ಉಳಿಸಲು ತನ್ನ ಪ್ರಾಣ ತ್ಯಾಗ ಮಾಡಿದ ಸಾಕು ನಾಯಿ!

ಮಾಲೀಕನ ಪ್ರಾಣಕ್ಕೆ ಅಪಾಯವಾದಾಗ ಸಾಕು ನಾಯಿಯೊಂದು ತನ್ನ ಪ್ರಾಣವನ್ನೇ ಬಲಿದಾನ ಮಾಡಿ ಆತನ ಜೀವ ರಕ್ಷಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹುಲಿ ದಾಳಿಯಿಂದ ಮಾಲೀಕನ ಪ್ರಾಣ ಉಳಿಸಿದ ಸಾಕು ನಾಯಿ (ಸಂಗ್ರಹ ಚಿತ್ರ)
ಹುಲಿ ದಾಳಿಯಿಂದ ಮಾಲೀಕನ ಪ್ರಾಣ ಉಳಿಸಿದ ಸಾಕು ನಾಯಿ (ಸಂಗ್ರಹ ಚಿತ್ರ)
Updated on

ಲಖನೌ: ಮಾಲೀಕನ ಪ್ರಾಣಕ್ಕೆ ಅಪಾಯವಾದಾಗ ಸಾಕು ನಾಯಿಯೊಂದು ತನ್ನ ಪ್ರಾಣವನ್ನೇ ಬಲಿದಾನ ಮಾಡಿ ಆತನ ಜೀವ ರಕ್ಷಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಶಹಾಜನ್ ಪುರದ ಕುತಾರ್ ಪಟ್ಟಣದ ಬಬ೯ತ್‍ಪುರ ಗ್ರಾಮದಲ್ಲಿ ಈ ಧಾರುಣ ಘಟನೆ ನಡೆದಿದ್ದು, ಕಾಡಿನಿಂದ ಬಂದ ಹುಲಿಯೊಂದು ಮಾಲೀಕನ ಮೇಲೆ ದಾಳಿ ಮಾಡಲು ಯತ್ನಿಸಿದೆ. ಈ ವೇಳೆ ಮಾಲೀಕನ ಪ್ರಾಣ ರಕ್ಷಣೆಗೆ ಮುಂದಾದ ನಾಯಿ, ಹುಲಿ ಮೇಲೆ ಎರಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದೆ. ಗುರುದೇವ್ ಸಿಂಗ್ ಎಂಬ ರೈತನೇ ಹುಲಿ ದಾಳಿಯಿಂದ ಪಾರಾಗಿದ್ದು, ಆತನ ರಕ್ಷಣೆಗೆ ಬಂದ ಸಾಕು ನಾಯಿ ಜಾಕಿ ಹುಲಿಗೆ ಆಹಾರವಾಗಿದೆ.

ಏನಿದು ಘಟನೆ?
ಉತ್ತರ ಪ್ರದೇಶದ ಶಹಜಹಾನ್ ಪುರದ ದುದ್ವಾ ಅಭಯಾರಣ್ಯಕ್ಕೆ ಹೊ೦ದಿರುವ ಕುತಾರ್ ಪಟ್ಟಣದ ಬಬ೯ತ್‍ಪುರ ಗ್ರಾಮದಲ್ಲಿ ರೈತ ಗುರುದೇವ್ ಸಿಂಗ್ ನಿವಾಸವಿದ್ದು, ಕಳೆದ ಶುಕ್ರವಾರ ರಾತ್ರಿ ಸಾಮಾನ್ಯದಂತೆಯೇ ಗುರುದೇವ್ ಸಿಂಗ್ ಮನೆಯ ಹೊರಾ೦ಗಣದಲ್ಲಿ ನಿದ್ದೆಗೆ ಶರಣಾಗಿದ್ದರು. ಇವರ ಪಕ್ಕದಲ್ಲೇ ನಾಲ್ಕು ವಷ೯ದ ಸಾಕುನಾಯಿ "ಜಾಕಿ' ಕೂಡ ಮಲಗಿತ್ತು. ಈ ವೇಳೆ ಕಾಡಿನಿ೦ದ ಬಂದಿದ್ದ ಹುಲಿಯೊ೦ದು ಮನೆ ಹತ್ತಿರ ಬರುತ್ತಿರುವುದನ್ನು ಗಮನಿಸಿದ ಜಾಕಿ ಜೋರಾಗಿ ಬೊಗಳುವ ಮೂಲಕ ತಕ್ಷಣವೇ ಮಾಲೀಕನನ್ನು ಎಚ್ಚರಗೊಳಿಸಿತು. ನಿದ್ದೆಗಣ್ಣಿನಲ್ಲಿ ಏನಾಗುತ್ತಿದೆ ಎಂದು ಗುರುದೇವ್‍ಸಿ೦ಗ್ ಊಹಿಸುವ ಮೊದಲೇ ಹುಲಿ ಹತ್ತಿರ ಬ೦ದಿತ್ತು.

ಕೂಡಲೇ ಗುರುದೇವ್ ಸಿಂಗ್ ಪಕ್ಕದಲ್ಲೇ ಇದ್ದ ಮರದ ಕಟ್ಟಿಗೆ ಹಿಡಿದು ದಾಳಿಗೆ ಸಿದ್ಧಗೊಳ್ಳುತ್ತಿದಂತೆ ಹುಲಿ ಆತನ ಮೇಲೆ ಎರಗಲು ಮುಂದಾಗಿತ್ತು. ಈ ವೇಳೆ ಸಾಕು ನಾಯಿ ಜಾಕಿ ಹುಲಿ  ಮೇಲೆ ಎರಗಿತ್ತು. ಕೆಲ ಹೊತ್ತು ಹುಲಿಯೊಂದಿಗೆ ಸಾಕು ನಾಯಿ ಜಾಕಿ ಕಾದಾಡಿತ್ತು. ಇದೇ ಸಂದರ್ಭದಲ್ಲಿ ರೈತ ಗುರುದೇವ್ ಸಿಂಗ್ ಕೂಗಿ ಎಲ್ಲರನ್ನೂ ಎಬ್ಬಿಸುವಷ್ಟರಲ್ಲಿಯೇ ಹುಲಿ ಜಾಕಿಯನ್ನು  ಎದ್ದೇಳಲು ಕೂಡ ಆಗದಂತೆ ಘಾಸಿ ಗೊಳಿಸಿತ್ತು. ಅಲ್ಲದೆ ನೋಡನೋಡುತ್ತಿದ್ದಂತೆಯೇ ಗಂಭೀರವಾಗಿ ಗಾಯಗೊಂಡಿದ್ದ ಜಾಕಿ ನಾಯಿಯನ್ನು ಹುಲಿ ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಅರಣ್ಯದಲ್ಲಿ ಎಳೆದುಕೊಂಡು ಪರಾರಿಯಾಯಿತು.

ಈ ಘಟನೆಯಿಂದ ಭಯಭೀತರಾದ ಕುಟು೦ಬ ಸದಸ್ಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು, ಘಟನಾ ಪ್ರದೇಶಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಹುಲಿಗಾಗಿ ಶೋಧ  ನಡೆಸಿದ್ದಾರೆ. ಈ ವೇಳೆ ಗುರುದೇವ್ ಸಿಂಗ್ ಅವರ ಮನೆಯಿಂದ ಸುಮಾರು ಅಧ೯ ಕಿ.ಮೀ. ದೂರದಲ್ಲಿ ಸಾಕು ನಾಯಿ ಜಾಕಿಯ ಮೃತದೇಹ ಪತ್ತೆಯಾಗಿದ್ದು, ನಾಯಿ ದೇಹದ ಬಹುತೇಕ  ಭಾಗವನ್ನು ಹುಲಿ ಅದಾಗಲೇ ತಿಂದು ಮುಗಿಸಿತ್ತು. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಸಿಬ್ಬಂದಿ ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.

ಗುರುದೇವ್ ಸಿಂಗ್ ಅವರ ಮಕ್ಕಳಾದ ಸುಪ್ರೀತ್, ಗುಲ್ಷನ್‍ಪ್ರೀತ್ ಅವರು ನಾಲ್ಕು ವರ್ಷಗಳ ಹಿಂದೆ ಒಂದು ಬೀದಿನಾಯಿಯನ್ನು ಮನೆಗೆ ತ೦ದು ಸಾಕಿದ್ದರು. ಅಲ್ಲದೆ ಅದಕ್ಕೆ ಜಾಕಿ ಎಂದು  ಹೆಸರಿಟ್ಟಿದ್ದರು. ಮನೆ ಸದಸ್ಯನಂತಿದ್ದ ಜಾಕಿ ನಾಯಿಯೂ ನಿತ್ಯವೂ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿತ್ತು ಎಂದು ರೈತ ಗುರುದೇವ್ ಸಿಂಗ್ ಹೇಳಿದ್ದಾರೆ.

ನಾಯಿ ಸಾಹದ ಕುರಿತು ಮಾತನಾಡಿದ ರೈತ ಗುರುದೇವ್ ಸಿಂಗ್ "ಒ೦ದಷ್ಟು ದಿನ ಊಟ ಹಾಕಿದ್ದಕ್ಕಾಗಿ ನನಗಾಗಿ ಜಾಕಿ ತನ್ನ ಪ್ರಾಣವನ್ನೇ ಬಲಿಕೊಟ್ಟಿದೆ ಎ೦ದು ಕ೦ಬನಿ ಮಿಡಿದಿದ್ದಾರೆ. ಇನ್ನು  ದುದ್ವಾ ಅಭಯಾರಣ್ಯಕ್ಕೆ ಹೊ೦ದಿರುವ ದಕ್ಷಿಣ ಖೇರಿ ಅರಣ್ಯವನ್ನು ಸ್ಥಳೀಯರು ಒತ್ತುವರಿ ಮಾಡಿಕೊ೦ಡಿದ್ದು, ಆಹಾರ ಅರಸಿಕೊ೦ಡು ಗ್ರಾಮಗಳ ಮೇಲೆ ಹುಲಿಗಳು ದಾಳಿ ನಡೆಸುವುದು ಇಲ್ಲಿ  ಸಾಮಾನ್ಯವಾಗಿದೆ ಎ೦ದು ಅರಣ್ಯಾಧಿಕಾರಿ ಎಸ್.ಎನ್. ಯಾದವ್ ತಿಳಿಸಿದ್ದಾರೆ.

ಒಟ್ಟಾರೆ ಸ್ವಾಮಿನಿಷ್ಠೆದೆ ಮತ್ತೊಂದು ಹೆಸರೇ ನಾಯಿ ಎಂಬುದು ಈ ಪ್ರಕರಣದಿಂದ ಮತ್ತೆ ಸಾಬೀತಾಗಿದ್ದು, ಅನ್ನ ಹಾಕಿದ ಯಜಮಾನನಿಗೆ ಸ೦ಕಷ್ಟ ಬ೦ದಾಗ ತನ್ನ ಪ್ರಾಣವನ್ನೇ ಬಲಿ ಕೊಟ್ಟು,  ಮಾಲೀಕನ ಪ್ರಾಣ ಕಾಪಾಡಿದ ಜಾಕಿ ನಾಯಿಯ ಕಾರ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com