ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಸಂಚು ನಡೆಸಿದೆ ಎಂದು ವರದಿ ತಿಳಿಸಿದೆ.
1993 ರಲ್ಲಿ ಮುಂಬಯಿಯಲ್ಲಿ ನಡೆದ ಸರಣಿ ಸ್ಫೋಟದಂತೆ ದೆಹಲಿಯಲ್ಲೂ ನಡೆಸುವಂತೆ ದಾವೂದ್ ತನ್ನ ಸಹಚರರಿಗೆ ಆದೇಶ ನೀಡಿದ್ದಾನೆ ಎನ್ನಲಾಗಿದೆ. ನಕಲಿ ನೋಟು ಮುದ್ರಣ, ಭಾರತದಲ್ಲಿ ಡ್ರಗ್ಸ್ ಪೂರೈಕೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ದಾವೂದ್ ದೇಶಾದ್ಯಂತ ಉಗ್ರ ಚಟುವಟಿಕೆಗಳನ್ನು ನಡೆಸಲು ಸಂಚು ನಡೆಸಿದ್ದಾನೆ ಎಂದು ಗುಪ್ತ ಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಮಧ್ಯಪ್ರದೇಶದಲ್ಲಿ ಕೆಲ ಮಂದಿಗೆ ತರಬೇತಿ ನೀಡಲಾಗಿದ್ದು, ಅವರು ಈಗಾಗಲೇ ದೆಹಲಿ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ.ದೆಹಲಿ ಪೊಲೀಸರು ಡಿ ಗ್ಯಾಂಗ್ ನ ಭಯೋತ್ಪಾದಕರನ್ನು ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.
ದೆಹಲಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ, ವಿಧಾನಸಭೆ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
Advertisement