ಎಂಟಿಸಿಆರ್ ಗೆ ಭಾರತ ಅವಿರೋಧ ಆಯ್ಕೆ, ಅತ್ಯಾಧುನಿಕ ಕ್ಷಿಪಣಿ ಖರೀದಿ ಸಲೀಸು

ಭಾರತದ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್) ಗೆ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. ಹೀಗಾಗಿ ಭಾರತ ಇನ್ನು ವಿಶ್ವದ ಯಾವುದೇ ಅತ್ಯಾಧುನಿಕ ತಂತ್ರಜ್ಞಾನದ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಅರ್ಹತೆ ಪಡೆದಿದೆ...
ಎಂಸಿಟಿಸಿಆರ್ ಮತ್ತು ಅತ್ಯಾಧುನಿಕ ಪ್ರಿಡೇಟರ್ ಡ್ರೋಣ್ (ಸಂಗ್ರಹ ಚಿತ್ರ)
ಎಂಸಿಟಿಸಿಆರ್ ಮತ್ತು ಅತ್ಯಾಧುನಿಕ ಪ್ರಿಡೇಟರ್ ಡ್ರೋಣ್ (ಸಂಗ್ರಹ ಚಿತ್ರ)
Updated on

ವಾಷಿಂಗ್ಟನ್: ಭಾರತದ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್) ಗೆ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. ಹೀಗಾಗಿ ಭಾರತ  ಇನ್ನು ವಿಶ್ವದ ಯಾವುದೇ ಅತ್ಯಾಧುನಿಕ ತಂತ್ರಜ್ಞಾನದ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಅರ್ಹತೆ ಪಡೆದಿದೆ.

ಎಂಟಿಸಿಆರ್‌ಗೆ ಭಾರತವನ್ನು ಸೇರ್ಪಡೆ ಮಾಡುವ ಕುರಿತು ವಿರೋಧಗಳಿದ್ದರೆ ಆ ಕುರಿತು ಅಭಿಪ್ರಾಯ ಸಲ್ಲಿಸಲು ಒಕ್ಕೂಟದ 34 ಸದಸ್ಯ ರಾಷ್ಟ್ರಗಳಿಗೆ ನೀಡಿದ್ದ ಗಡುವು ಸೋಮವಾರ  ಅಂತ್ಯಗೊಂಡಿದ್ದು, ಗಡುವು ಮುಗಿದರೂ ಯಾವುದೇ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಭಾರತ ತಾನೇ ತಾನಾಗಿ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಒಕ್ಕೂಟ ನಿರ್ವಹಣಾ  ಮಂಡಳಿ ನೀಡಿದ್ದ ಗಡುವಿನ ಅವಧಿಯಲ್ಲಿ ಯಾವುದೇ ಸದಸ್ಯ ರಾಷ್ಟ್ರ ಭಾರತದ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ಎಂಟಿಸಿಆರ್‌ ಸೇರ್ಪಡೆಗೆ ಭಾರತಕ್ಕೆ ಎದುರಾಗಿದ್ದ  ಬಹುದೊಡ್ಡ ಅಡ್ಡಿಯೊಂದು ಈ ಮೂಲಕ ನಿವಾರಣೆಯಾಗಿದ್ದು, ಭಾರತ ಇದೀಗ ಎಂಟಿಸಿಆರ್ ಗೆ ಸೇರ್ಪಡೆಯಾಗಿದೆ. ಇದು ಎನ್‌ಎಸ್‌ಜಿ ಸದಸ್ಯತ್ವ ಪಡೆಯುವ ಭಾರತದ ಕನಸಿಗೆ ಮತ್ತಷ್ಟು ಬಲ  ನೀಡಲಿದೆ.

ದಶಕಗಳ ಕನಸು ನನಸು ಮಾಡಿದ ಅಗ್ನಿ1
ಒಡಿಶಾ ತೀರದ ನೆಲೆಯಲ್ಲಿ ಕಳೆದ ನವೆಂಬರ್ 27ರಂದು ನಡೆದಲ ಅಗ್ನಿ 1 ಖಂಡಾಂತರ ಕ್ಷಿಪಣಿ ಪ್ರಯೋಗ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಭಾರತ ಈ ಒಕ್ಕೂಟಕ್ಕೆ ಸೇರುವ ಎಲ್ಲ  ಅರ್ಹತೆಗಳನ್ನೂ ಪಡೆದಿದೆ. ಈ ಬಗ್ಗೆ ಮಾತನಾಡಿರುವ ಅಮೆರಕ ಅಧ್ಯಕ್ಷರ ಕಚೇರಿಯ ಅಧಿಕೃತ ಉನ್ನತಾಧಿಕಾರಿಗಳು, " ಭಾರತ ಎಂಟಿಸಿಆರ್ ಸೇರುವುದರಲ್ಲಿ ಯಾವುದೇ ಅಡೆತಡೆಗಳಿಲ್ಲ  ಎಂದು ಹೇಳಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮಾ ಅವರು ಒಕ್ಕೂಟಕ್ಕೆ ಭಾರತದ ಸೇರ್ಪಡೆಯನ್ನು ಬಲವಾಗಿ ಬೆಂಬಲಿಸಿದ್ದು, ಸದಸ್ಯತ್ವ ಪ್ರದಾನಕ್ಕೆ ಸಮ್ಮತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ ನಿರ್ಣಾಯಕವಾದ ದೊಡ್ಡಣ್ಣನ ಬೆಂಬಲ
ಇನ್ನು ಭಾರತದ ದಶಕಗಳ ಕನಸು ಸಾಕಾರಗೊಳ್ಳುವಲ್ಲಿ ಅಮೆರಿಕ ನಿರ್ಣಾಯಕ ಪಾತ್ರ ವಹಿಸಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭೇಟಿ  ಮತ್ತು ಚರ್ಚೆ ಫಲ ನೀಡಿವೆ. ಎಂಟಿಸಿಆರ್‌ನಲ್ಲಿ ಭಾರತದ ಸೇರ್ಪಡೆಗೆ ಹಲವು ಸದಸ್ಯ ರಾಷ್ಟ್ರಗಳು ನಾನಾ ರೀತಿಯ ಕ್ಯಾತೆ ತೆಗೆದುಕೊಂಡೇ ಬಂದಿದ್ದವು. ಆದರೆ ಈ ಕುರಿತು ಮೋದಿ ಅವರ  ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಒಬಾಮಾ ಆಡಳಿತ, ಸದಸ್ಯ ರಾಷ್ಟ್ರಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಮನವೊಲಿಸಿ, ಯಾವುದೇ ವಿರೋಧ ವ್ಯಕ್ತವಾಗದಂತೆ ನೋಡಿಕೊಂಡಿದೆ  ತಜ್ಞರು ಹೇಳಿದ್ದಾರೆ.

ಏನಿದು ಎಂಟಿಸಿಆರ್  ?
1987ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್) ಜಾಗತಿಕ ಮಟ್ಟದ ಸ್ವಯಂಸೇವಾ ಸಂಸ್ಥೆಯಾಗಿದೆ. ಗುರುತ್ವ ಬಲ ಬಳಸಿ ಗುರಿ ಮುಟ್ಟುವ (ಬ್ಯಾಲಿಸ್ಟಿಕ್‌)  ಕ್ಷಿಪಣಿಗಳು ಹಾಗೂ ಮಾನವರಹಿತ ವೈಮಾನಿಕ ನೌಕೆ (ಡ್ರೋನ್‌)ಗಳ ಪ್ರಸರಣಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ. ಖಂಡಾಂತರ ಕ್ಷಿಪಣಿ ಮೇಲೆ ನಿಯಂತ್ರಣ, ರಾಸಾಯನಿಕ, ಜೈವಿಕ  ಮತ್ತು ಪರಮಾಣು ದಾಳಿಗೆ ಬಳಕೆಯಾಗುವ ಕ್ಷಿಪಣಿಗಳ ಅಸಂಪ್ರದಾಯಿಕ ಮಾರಾಟದ ಮೇಲೆ ನಿಗಾ ವಹಿಸುವ ಕಾರ್ಯವನ್ನು ಈ ಒಕ್ಕೂಟ ಮಾಡುತ್ತದೆ. ಈ ಒಕ್ಕೂಟದ ಅಡಿ 34 ಸದಸ್ಯ  ರಾಷ್ಟ್ರಗಳಿದ್ದು, ಅವುಗಳಲ್ಲಿ ಬಹುತೇಕ ದೇಶಗಳು ಕ್ಷಿಪಣಿ ಉತ್ಪಾದನೆಯಲ್ಲಿ ಮುಖ್ಯ ಪಾತ್ರ ಹೊಂದಿವೆ. 2008ರಿಂದ ಎಂಟಿಸಿಆರ್​ಗೆ ಏಕಪಕ್ಷೀಯ ಅನುಯಾಯಿಯಾಗಿರುವ ಪಂಚ ರಾಷ್ಟ್ರಗಳ  ಪೈಕಿ ಭಾರತವೂ ಒಂದಾಗಿದ್ದು, 300 ಕಿ.ಮೀ. ದೂರದವರೆಗೆ 500 ಕೆಜಿಯಷ್ಟು ಮಾತ್ರ ಶಸ್ತ್ರಾಸ್ತ್ರಗಳನ್ನು ಹೊರಬಲ್ಲ ಕ್ಷಿಪಣಿಗಳನ್ನು ಮಾತ್ರ ತಯಾರಿಸುವಂತೆ 34 ಸದಸ್ಯ ರಾಷ್ಟ್ರಗಳಿಗೆ  ಎಂಟಿಸಿಆರ್ ಮನವಿ ಮಾಡಿದೆ.

ಎಂಟಿಸಿಆರ್ ಸೇರ್ಪಡೆಯಿಂದ ಭಾರತಕ್ಕಾಗುವ ಲಾಭ ಏನು?
ಎಂಟಿಸಿಆರ್‌ ಸದಸ್ಯತ್ವ ಪಡೆದ ಬಳಿಕ ಭಾರತ, ಹೈಟೆಕ್‌ ಕ್ಷಿಪಣಿಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲು ಮತ್ತು ಆಮದು ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. ಜೊತೆಗೆ ಆಫ್ಘಾನಿಸ್ತಾನದ  ತಾಲಿಬಾನ್‌ ನಾಯಕರನ್ನು ಕೊಲ್ಲಲು ಅಮೆರಿಕ ಬಳಸುತ್ತಿರುವಂತಹ "ಪ್ರಿಡೆಟರ್‌ ಡ್ರೋನ್‌'ಗಳನ್ನು ಖರೀದಿಸಲು ಈ ಒಕ್ಕೂಟದ ಸದಸ್ಯತ್ವ ಅನುವು ಮಾಡಿಕೊಡುತ್ತದೆ. ಅಲ್ಲದೆ ಭಾರತ ತನ್ನ  ಮಿತ್ರ ರಾಷ್ಟ್ರಗಳಿಗೆ ಉನ್ನತ ತಂತ್ರಜ್ಞಾನದ ಕ್ಷಿಪಣಿಗಳನ್ನು ರಫ್ತು ಮಾಡುವ ಪ್ರಕ್ರಿಯೆ ಸರಾಗವಾಗಲಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com