ವನ್ಯಮೃಗಗಳನ್ನು ಕೊಲ್ಲಲು ಪರಿಸರ ಸಚಿವಾಲಯ ಅನುಮತಿ ನೀಡಿರುವುದು ಸರಿಯಲ್ಲ: ಮನೇಕಾ ಗಾಂಧಿ

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ತಮ್ಮ ಸಂಪುಟ ಸಹೋದ್ಯೋಗಿ ಪರಿಸರ ಖಾತೆ ಸಚಿವ ಪ್ರಕಾಶ್ ...
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ತಮ್ಮ ಸಂಪುಟ ಸಹೋದ್ಯೋಗಿ ಪರಿಸರ ಖಾತೆ ಸಚಿವ ಪ್ರಕಾಶ್ ಜಾವದೇಕರ್ ಅವರ ವಿರುದ್ಧವೇ ಹರಿಹಾಯ್ದಿದ್ದಾರೆ. ಪರಿಸರ ಸಚಿವಾಲಯ ಮುಗ್ಧ ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಿದೆ ಎಂದು ಆರೋಪಿಸಿದ್ದಾರೆ.

ಬಿಹಾರದ ಪಾಟ್ನಾದಲ್ಲಿ ಹಲವಾರು ಜಿಂಕೆಗಳನ್ನು ಕೊಂದು ಹಾಕಲಾಗಿತ್ತು ಎಂಬ ವರದಿಗೆ ಪ್ರತಿಕ್ರಿಯಿಸಿದ ಮನೇಕಾ ಗಾಂಧಿ, ಮುಗ್ಧ ಪ್ರಾಣಿಗಳನ್ನು ಕೊಲ್ಲುವ ಹಿಂದೆ ಕಾಮ, ಬಯಕೆಗಳೇನೆಂದು ನನಗೆ ಅರ್ಥವಾಗುತ್ತಿಲ್ಲ ಎಂದರು.

ಪರಿಸರ ಸಚಿವಾಲಯ ಪ್ರತಿ ರಾಜ್ಯಕ್ಕೆ ಪತ್ರ ಬರೆದು ಯಾವ ಪ್ರಾಣಿಯನ್ನು ಕೊಂದು ಹಾಕಲು ಇಚ್ಛಿಸುತ್ತೀರಿ ಎಂದು ಕೇಳಿ ಅದಕ್ಕೆ ಅನುಮತಿ ಕೊಡುತ್ತದೆ. ಪಶ್ಚಿಮ ಬಂಗಾಳದಲ್ಲಿ ಆನೆಯನ್ನು ಕೊಲ್ಲಲು ಅನುಮತಿ ನೀಡಿದರೆ, ಹಿಮಾಚಲ ಪ್ರದೇಶದಲ್ಲಿ ಮಂಗಗಳನ್ನು, ಗೋವಾದಲ್ಲಿ ನವಿಲುಗಳನ್ನು ಕೊಲ್ಲಲು ಅನುಮತಿ ಕೊಟ್ಟಿದೆ ಎಂದು ಆಪಾದಿಸಿದರು.

ಚಂದ್ರಾಪುರದಲ್ಲಿ 53 ಕಾಡುಹಂದಿಗಳನ್ನು ಈಗಾಗಲೇ ಸಾಯಿಸಲಾಗಿದೆ. ಇನ್ನೂ 50 ಕಾಡುಹಂದಿಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ. ಪರಿಸರ ಸಚಿವಾಲಯ ವನ್ಯಮೃಗಗಳ ಇಲಾಖೆಯ ಆಡಳಿತವನ್ನು ಹೊಂದಿದ್ದು, ಯಾಕೆ ಹೀಗೆ ವನ್ಯ ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಸ್ಥಳೀಯ ಜನರಿಗೆ ಜಿಂಕೆಯನ್ನು ಸಾಯಿಸಲು ಸಾಧ್ಯವಾಗುವುದಿಲ್ಲ ಎಂಬುದು ನಾಚಿಕೆಗೇಡಿನ ವಿಷಯ. ಅದಕ್ಕಾಗಿ ಪರಿಸರ ಸಚಿವಾಲಯ ಬೇರೆ ಬೇರೆ ರಾಜ್ಯಗಳಿಂದ ಶೂಟರ್ ಗಳನ್ನು ಕರೆಸಲಾಗುತ್ತದೆ. ಹೈದರಾಬಾದ್ ನಿಂದ ಬಂದ ಶೂಟರ್ ಗಳು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಎಲ್ಲೆಲ್ಲಾ ವನ್ಯಮೃಗಗಳನ್ನು ಕೊಲ್ಲಲು ಹೇಳಿದ್ದಾರೆಯೋ ಅಲ್ಲಿ ಶೂಟ್ ಮಾಡಿ ಕೊಲ್ಲುತ್ತಾರೆ. ಇಲ್ಲಿ ಒಂದು ಗಮನಿಸಬೇಕಾದ ಅಂಶವೆಂದರೆ ಗ್ರಾಮಸ್ಥರು ಅಥವಾ ರೈತರು ವನ್ಯಮೃಗಗಳನ್ನು ಕೊಲ್ಲುವಂತೆ ಮನವಿ ಮಾಡಿರಲಿಲ್ಲ ಎಂದು ಮನೇಕಾ ಗಾಂಧಿ ವಿವರಿಸಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಮಂಗಗಳನ್ನು ಉಪದ್ರಕಾರಿ ಪ್ರಾಣಿಯೆಂದು ಘೋಷಿಸಿ, ಶಿಮ್ಲಾದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರ್ನಾಮ ಮಾಡಲಾಗಿತ್ತು. ಗೋವಾದಲ್ಲಿ ನವಿಲು ರೈತರ ಜಮೀನುಗಳಿಗೆ ನುಗ್ಗಿ ರೈತರ ಬೆಳೆ ನಾಶ ಮಾಡುತ್ತದೆ ಎಂದು ಕೊಲ್ಲಲು ಅರಣ್ಯ ಸಚಿವಾಲಯ ಆದೇಶ ನೀಡಿತ್ತು. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕೂಡ ಸುಮಾರು 300 ವನ್ಯಮೃಗಗಳನ್ನು ರೈತರ ಬೆಳೆಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಕೊಂದುಹಾಕಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com