ಗುಲ್ಬರ್ಗ್ ಹತ್ಯಾಕಾಂಡ: ಶಿಕ್ಷೆ ಪ್ರಮಾಣ ಘೋಷಣೆ ನಾಳೆಗೆ ಮುಂದೂಡಿಕೆ

ಗೋದ್ರೋತ್ತರ ಹಿಂಸಾಚಾರದ ವೇಳೆ 69 ಮಂದಿಯ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದಿದ್ದ ಹತ್ಯಾಕಾಂಡ ಪ್ರಕರಣದ ಅಪರಾಧಿಗಳ ಶಿಕ್ಷೆ ಪ್ರಮಾಣ ಘೋಷಣೆಯನ್ನು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಮತ್ತೆ ಮುಂದೂಡಿದ್ದು, ನಾಳೆ ಶಿಕ್ಷೆ ಪ್ರಮಾಣ ಘೋಷಣೆ ವಿಚಾರಣೆ ನಡೆಯಲಿದೆ...
ಗುಲ್ಬರ್ಗ್ ಹತ್ಯಾಕಾಂಡ (ಸಂಗ್ರಹ ಚಿತ್ರ)
ಗುಲ್ಬರ್ಗ್ ಹತ್ಯಾಕಾಂಡ (ಸಂಗ್ರಹ ಚಿತ್ರ)

ಅಹ್ಮದಾಬಾದ್: ಗೋದ್ರೋತ್ತರ ಹಿಂಸಾಚಾರದ ವೇಳೆ 69 ಮಂದಿಯ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದಿದ್ದ ಹತ್ಯಾಕಾಂಡ ಪ್ರಕರಣದ ಅಪರಾಧಿಗಳ ಶಿಕ್ಷೆ ಪ್ರಮಾಣ  ಘೋಷಣೆಯನ್ನು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಮತ್ತೆ ಮುಂದೂಡಿದ್ದು, ನಾಳೆ ಶಿಕ್ಷೆ ಪ್ರಮಾಣ ಘೋಷಣೆ ವಿಚಾರಣೆ ನಡೆಯಲಿದೆ.

2002ರ ಗುಜರಾತ್ ಹಿಂಸಾಚಾರ ವೇಳೆ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 69 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ   ಆರೋಪಿಗಳ ಪರ-ವಿರೋಧ ವಕೀಲರ ವಾದಗಳನ್ನು ಆಲಿಸಿದ ಅಹ್ಮದಾಬಾದ್ ವಿಶೇಷ ನ್ಯಾಯಾಲಯದ ಶಿಕ್ಷೆ ಪ್ರಮಾಣದ ಘೋಷಣೆಯನ್ನು ಸತತ ಎರಡನೇ ಬಾರಿಗೆ ಮುಂದೂಡುತ್ತಿದ್ದು, ಈ  ಹಿಂದೆ ಕಳೆದ ಸೋಮವಾರ ನಡೆದಿದ್ದ ವಿಚಾರಣೆ ವೇಳೆ ಶಿಕ್ಷೆ ಪ್ರಮಾಣ ಘೋಷಣೆಯನ್ನು ಗುರುವಾರಕ್ಕೆ ಮುಂದೂಡಿತ್ತು.

ಇಂದು ಪ್ರಕರಣದ ವಿಚಾರಣೆ ನಡೆದಿದ್ದು, ಅಪರಾಧಿಗಳ ಪರ ವಕೀಲ ಅಭಯ್ ಭಾರದ್ವಾಜ್ ಅವರು ಕಡಿಮೆ ಪ್ರಮಾಣದ ಶಿಕ್ಷೆ ನೀಡಲು ಮಂಡಿಸಿದ ಪ್ರಬಲ ವಾದವನ್ನು ಆಲಿಸಿದ ನ್ಯಾಯಮೂರ್ತಿ ಪಿಬಿ ದೇಸಾಯಿ ಅವರು ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ. ಇದಕ್ಕೂ ಮೊದಲು ತಮ್ಮ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಪರ ವಕೀಲ ಎಸ್ ಎಂ ವೋರ್ಹಾ ಅವರು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇವರಿಗೆ ನೀಡುವ ಶಿಕ್ಷೆ ಇತರರಿಗೆ  ಮಾದರಿಯಾಗಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ಪ್ರಕರಣ ಸಂಬಂಧ ಕಳೆದ ಗುರುವಾರ ತನ್ನ ಅಂತಿಮ ತೀರ್ಪು ನೀಡಿದ್ದ ನ್ಯಾಯಾಲಯ ಒಟ್ಟು 50 ಮಂದಿ ಆರೋಪಿಗಳ ಪೈಕಿ 36 ಮಂದಿಯನ್ನು ಸಾಕ್ಷ್ಯಾಧಾರದ ಕೊರತೆಯಿಂದಾಗಿ ಖುಲಾಸೆ   ಮಾಡಿ 24 ಮಂದಿ ಆರೋಪಗಳು ಎಂದು ಘೋಷಿಸಿತ್ತು. ಈ ಪೈಕಿ 11 ಆರೋಪಿಗಳ ವಿರುದ್ಧ ಕೊಲೆ ಆರೋಪ ದಾಖಲಾಗಿದ್ದು, ಉಳಿದ 13 ಮಂದಿಯ ವಿರುದ್ಧ ಇತರೆ ಆರೋಪಗಳು   ಸಾಬೀತಾಗಿದ್ದವು.

2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ನಡೆದ ಗೋದ್ರೋತ್ತರ ಹತ್ಯಾಕಾಂಡಗಳಲ್ಲಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಮುಖ ಪ್ರಕರಣವಾಗಿದೆ. ಈ ಹತ್ಯಾಕಾಂಡದಲ್ಲಿ   ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು  69 ಮಂದಿಯನ್ನು ಧಾರುಣವಾಗಿ ಕೊಲ್ಲಲಾಗಿತ್ತು. ಈವರೆಗೂ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನಾಲ್ಕು ಮಂದಿ   ನ್ಯಾಯಾಧೀಶರ ಬದಲಾವಣೆಯಾಗಿದ್ದು, ಇಂದು ತೀರ್ಪು ನೀಡಿರುವ ನ್ಯಾ. ಪಿಬಿ ದೇಸಾಯಿ 5ನೇ ನ್ಯಾಯಾಧೀಶರಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ದೇಸಾಯಿ ಅವರು ಪ್ರಕರಣದ  ವಿಚಾರಣೆ ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com