
ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಯಲಾಗಿದೆ ಎನ್ನಲಾಗುತ್ತಿದ್ದ ಕುದುರೆ ವ್ಯಾಪಾರ ಪ್ರಕರಣವನ್ನು ಕೇಂದ್ರ ಚುನಾವಣೆ ಆಯೋಗ ಸಿಬಿಐ ತನಿಖೆ ಒಪ್ಪಿಸಿರುವುದನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್ ಅವರು ಶುಕ್ರವಾರ ಸ್ವಾಗತಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕುದುರೆ ವ್ಯಾಪಾರ ಪ್ರಕರಣವನ್ನು ಕೇಂದ್ರ ಚುನಾವಣಾ ಆಯೋಗ ಸಿಬಿಐ ತನಿಖೆಗೆ ಆದೇಶಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಕುದುರೆ ವ್ಯಾಪಾರ ಎಂಬುದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ದುರಾಭ್ಯಾಸ ಚಟವಾಗಿದೆ. ಪ್ರಕರಣ ತನಿಖೆಯಾಗಲೇಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂದು ಹೇಳಿದ್ದಾರೆ.
ನಿನ್ನೆಯಷ್ಟೇ ರಾಜ್ಯಸಭಾ ಚುನಾವಣೆ ಸಂಬಂಧ ಮಾತನಾಡಿದ್ದ ಕೇಂದ್ರ ಚುನಾವಣಾ ಆಯೋಗ ಅಧಿಕಾರಿಗಳು, ರಾಜ್ಯಸಭಾ ಚುನಾವಣೆ ವೇಳೆ ಲಂಚದ ಆರೋಪ ಕೇಳಿ ಬಂದಿದೆ. ಆದರೆ, ಚುನಾವಣೆಯನ್ನೇ ರದ್ದು ಪಡಿಸುವಷ್ಟು ದೊಡ್ಡ ಪ್ರಕರಣವಲ್ಲ. ಹೀಗಾಗಿ ಚುನಾವಣೆಯನ್ನು ಯಾವುದೇ ಕಾರಣಕ್ಕೂ ರದ್ದು ಪಡಿಸುವುದಿಲ್ಲ. ಪೂರ್ವನಿಗದಿತ ಸಮಯದಂತೆಯೇ ಜೂ.11ಕ್ಕೆ ಚುನಾವಣೆ ನಡೆಸಲಾಗುತ್ತದೆ ಎಂದು ಹೇಳಿದ್ದರು.
ಅಲ್ಲದೆ, ಲಂಚ ಪ್ರಕಣದಲ್ಲಿ ಪ್ರಮುಖವಾಗಿ ಕೇಳಿಬಂದಿದ್ದ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಮತ್ತಿತರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲು ಸೂಚನೆ ನೀಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿತ್ತು.
Advertisement