ಸಂಘದ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರಿ ಕೆಲಸ ನಿರ್ಬಂಧ ಅಸಂವಿಧಾನಿಕ: ಆರ್ಎಸ್ಎಸ್

ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಜಮಾತ್ -ಇ-ಇಸ್ಲಾಮಿ ಸಂಘಟನೆಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಜಮಾತ್ -ಇ-ಇಸ್ಲಾಮಿ ಸಂಘಟನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ಹಿಂದಿನ ಯುಪಿಎ ಸರ್ಕಾರ ಹೇರಿದ್ದ ನಿಷೇಧವನ್ನು ತರಾಟೆಗೆ ತೆಗೆದುಕೊಂಡ ಸಂಘ ನಿಷೇಧ ಹೇರಿಕೆ ಅಸಂವಿಧಾನಿಕ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿದೆ ಎಂದು ಹೇಳಿದೆ.

ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆರ್ ಎಸ್ಎಸ್ ಸಂವಹನ ವಿಭಾಗದ ಮುಖ್ಯಸ್ಥ ಮನಮೋಹನ್ ವೈದ್ಯ, ಕೇಂದ್ರ ಸರ್ಕಾರಿ ನೌಕರರು ಆರ್ ಎಸ್ ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ನಿಷೇಧ ಹೇರಿರುವ ಕ್ರಮ ಅಸಂವಿಧಾನಿಕ ಎಂದು ಅನೇಕ ಸಂದರ್ಭಗಳಲ್ಲಿ ಕೋರ್ಟ್ ತೀರ್ಪು ನೀಡಿದೆ ಎಂದು ಹೇಳಿದರು.

ಆರ್ ಎಸ್ಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರಿ ಸೇವೆಗಳಿಗೆ ಸೇರುವುದನ್ನು ನಿಷೇಧಿಸುವುದು ಕೂಡ ಅನ್ಯಾಯ ಮತ್ತು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ. ಇಂತಹ ನಿಷೇಧ ಕ್ರಮ ಸಂಘದ ಕೆಲಸ ಮತ್ತು ಕಾರ್ಯಕರ್ತರ ನೈತಿಕ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ. ಆರ್ ಎಸ್ಎಸ್ ಸರ್ಕಾರದ ಅಧಿಕಾರದ ಪ್ರಭಾವದಿಂದ ಕೆಲಸ ಮಾಡುವುದಿಲ್ಲ. ಆರ್ ಎಸ್ಎಸ್ ಜನರ ಮಧ್ಯೆ, ಜನರಿಗಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವೈದ್ಯ.

ರಾಷ್ಟ್ರೀಯ ಸ್ವಯಂ ಸೇವಾ ಕಾರ್ಯಕರ್ತರು ಕೇಂದ್ರ ಸರ್ಕಾರಿ ಸೇವೆಗೆ ಸೇರಬಾರದು ಎಂಬ ಐದು ದಶಕಗಳ ಹಳೆಯ ನಿರ್ಬಂಧವನ್ನು ಸರ್ಕಾರ ಹಿಂಪಡೆಯುವ ಸಾಧ್ಯತೆಯಿರುವ ಮಧ್ಯೆ ಮನಮೋಹನ್ ವೈದ್ಯ ಈ ಹೇಳಿಕೆ ನೀಡಿದ್ದಾರೆ. 1966ರಲ್ಲಿ ಆಡಳಿತದಲ್ಲಿದ್ದ ಕೇಂದ್ರ ಸರ್ಕಾರ ಸರ್ಕಾರಿ ನೌಕರರು ಆರ್ ಎಸ್ಎಸ್ ಮತ್ತು ಜಮಾತ್ ಇ ಇಸ್ಲಾಮಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ನಿರ್ಬಂಧ ಹೇರಿತ್ತು.

ಕಳೆದ ಗುರುವಾರ ಪ್ರಧಾನಿ ನರೇಂದ್ರ ಮೋದಿ ನಿರ್ಬಂಧವನ್ನು ಹಿಂತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಈ ಸಂಬಂಧ ಯಾವುದೇ ಆದೇಶ ಹೊರಡಿಸಿಲ್ಲ. ಹಳೆ ಆದೇಶಗಳು ಇದ್ದರೆ ಅದನ್ನು ಗೃಹ ಸಚಿವಾಲಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪರಾಮರ್ಶಿಸಲಾಗುವುದು ಎಂದು ಕೇಂದ್ರ ಸಿಬ್ಬಂದಿ ಮತ್ತು ಪಿಎಂಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಹಿನ್ನೆಲೆ:
ಗೃಹ ಸಚಿವಾಲಯ 1966ರಲ್ಲಿ ಆದೇಶವೊಂದನ್ನು ಹೊರಡಿಸಿ, ಕೇಂದ್ರ ಸರ್ಕಾರ ಉದ್ಯೋಗಕ್ಕೆ ಹೊಸದಾಗಿ ಸೇರುವವರೆಲ್ಲ ತಾವು ಆರ್ ಎಸ್ ಎಸ್ ಅಥವಾ ಜಮಾತ್ ಇ ಇಸ್ಲಾಮಿ ಸಂಘಟನೆಯ ಸದಸ್ಯರೆಲ್ಲ ಎಂದು ಘೋಷಣೆ ಬರೆದು ಕೊಡಬೇಕಾಗಿತ್ತು. ಆದೇಶದ ಪ್ರಕಾರ, ಯಾರಾದರೂ ಈ ಸಂಘಟನೆಗಳ ಸದಸ್ಯರಾಗಿದ್ದರೆ ಅವರಿಗೆ ಕೇಂದ್ರ ಸರ್ಕಾರ ಉದ್ಯೋಗ ಸಿಗುತ್ತಿರಲಿಲ್ಲ. ಈ ಕುರಿತ ಕಚೇರಿ ಮನವಿಯನ್ನು 1975 ಮತ್ತು 1980ರಲ್ಲಿ ಮತ್ತೆ ಹೊರಡಿಸಿ ಎಲ್ಲಾ ಕೇಂದ್ರ ಸಚಿವಾಲಯಗಳಿಗೆ ಮತ್ತು ಇಲಾಖೆಗಳಿಗೆ ಪ್ರಸಾರ ಮಾಡಲಾಗಿತ್ತು. ಆದರೆ ಈ ಆದೇಶವನ್ನು ಕಟ್ಟುನಿಟ್ಟಾಗಿ ಇದುವರೆಗೆ ಯಾವ ಇಲಾಖೆಗಳೂ ಜಾರಿಗೆ ತಂದಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com