
ವಿಲ್ಲುಪುರಂ: ಶಾಲೆಯಲ್ಲಿ ಶಿಸ್ತು ಪರಿಪಾಲನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ಕಾಲಿನ ಮೇಲೆ ಕರ್ಪೂರವಿಟ್ಟು ಬೆಂಕಿ ಹಚ್ಚಿ ಶಿಕ್ಷೆ ನೀಡಿರುವ ಅಮಾನವೀಯ ಘಟನೆಯೊಂದು ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದಿದೆ.
ಉಲಂದೂರು ಪೇಟ್ ಸಮೀಪದ ಪಾಲಿಯ ಪಂಚಾಯತ್ ಯೂನಿಯನ್ ಪ್ರೈಮರಿ ಶಾಲೆಯ ವೈಜಯಂತಿಮಾಲಾ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದ ಶಿಕ್ಷಕಿಯಾಗಿದ್ದಾಳೆ. 4 ಮತ್ತು 5 ನೇ ತರಗತಿಯ 13 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದು, ಶಾಲೆಯಲ್ಲಿ ಶಿಸ್ತು ಪರಿಪಾಲನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ಕಾಲಿನ ಮೇಲೆ ಕರ್ಪೂರ ಹಚ್ಚಿ ಶಿಕ್ಷೆ ನೀಡಿದ್ದಾಳೆ. ಮಕ್ಕಳು ನೋವು, ಉರಿಯಿಂದ ಕೂಗುತ್ತಿದ್ದರೂ ಕರಗದ ಶಿಕ್ಷಕಿ ಶಿಕ್ಷೆಯನ್ನು ಮುಂದುವರೆಸಿದ್ದಾಳೆ.
ಶಿಕ್ಷೆ ನೀಡಿದ ಬಳಿಕ ಮಕ್ಕಳಿಗೆ ಬೆದರಿಕೆ ಹಾಕಿರುವ ಶಿಕ್ಷಕಿ ಈ ಬಗ್ಗೆ ಯಾರಿಗೂ ಹೇಳದಂತೆ ತಿಳಿಸಿದ್ದಾಳೆ. ಕಾಲು ಸಿಟ್ಟ ಕಾರಣ ಮಕ್ಕಳು ಕುಂಟುತ್ತಾ ಮನೆಗೆ ಬರುತ್ತಿರುವುದನ್ನು ನೋಡಿದ ಪೋಷಕರು ಗಾಬರಿಗೊಂಡಿದ್ದಾರೆ. ನಂತರ ಮಕ್ಕಳನ್ನು ವಿಚಾರಿಸಿದಾಗ ಮಕ್ಕಳು ಸತ್ಯಾಂಶವನ್ನು ಬಾಯಿ ಬಿಟ್ಟಿದ್ದಾರೆ.
ಶಿಕ್ಷಕಿ ವರ್ತನೆಯನ್ನು ನೋಡಿದ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿರುವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು, ಶಿಕ್ಷಕಿ ವೈಜಯಂತಿಮಾಲಾ ಹಾಗೂ ಮುಖ್ಯ ಶಿಕ್ಷಕ ವರದರಾಜನ್ ಅವರನ್ನು ಅಮಾನತು ಮಾಡಿದೆ. ಅಲ್ಲದೆ, ಗಾಯಗೊಂಡಿದ್ದ ಸಂತೋಷ್ ರಾಜ್ (9), ಸುಬುಲಕ್ಷ್ಮಿ (8), ಪ್ರೀತಿ (9), ಹರಿ ಕೃಷ್ಣನ್ (9), ಪುಗಜೆನ್ತಿ (9), ಕೌಸಲ್ಯ (9) ರಾಜಶೇಖರ್ (10) ಮತ್ತು ಅನಿತಾ (10) ಎಂಬ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
Advertisement