ಮುಸ್ಲಿಂ ಯುವಕರು ಉಗ್ರರಾಗಲು ಬಾಬ್ರಿ, ಗೋದ್ರಾದಂತ ಕೋಮುಗಲಭೆಗಳೇ ಕಾರಣ!
ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಮತ್ತು ಗೋದ್ರಾ ಹತ್ಯಾಕಾಂಡದಂತಹ ಕೋಮು ಗಲಭೆಗಳಿಂದಾಗಿಯೇ ಮುಸ್ಲಿಂ ಯವಕರು ಉಗ್ರವಾದದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
2015ರ ಡಿಸೆಂಬರ್ ಮತ್ತು 2016ರ ಜನವರಿಯಲ್ಲಿ ದೇಶದ ಹಲವಡೆ ಬಂಧಿಸಲಾದ 17 ಮಂದಿ ಶಂಕಿತ ಭಯೋತ್ಪಾದಕರ ವಿರುದ್ಧ ಪೊಲೀಸರು ಇಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದರಲ್ಲಿ ಈ ವಿಷಯವನ್ನು ನಮೂದಿಸಿದ್ದಾರೆ ಎಂದು ತಿಳಿದುಬಂದಿದೆ. 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು 2002ರಲ್ಲಿ ನಡೆದ ಗೋದ್ರಾ ಹಿಂಸಾಚಾರ ಪ್ರಕರಣದಿಂದಾಗಿ ಹಲವು ಮುಸ್ಲಿಂ ಯುವಕರು ಉಗ್ರವಾದದತ್ತ ಮುಖ ಮಾಡಿದ್ದು, ಅಲ್ ಖೈದಾ ಉಗ್ರ ಸಂಘಟನೆ ಸ್ಥಾಪಿಸಿ ಭಾರತದಲ್ಲಿ ಉಗ್ರವಾದ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕೋಮು ಗಲಭೆಗಳ ನಂತರ ಸೇಡು ತೀರಿಸಿಕೊಳ್ಳುವ ಭಾವನೆಯಿಂದ ಹಲವು ಮುಸ್ಲಿಂ ಯುವಕರು ಪಾಕಿಸ್ತಾನಕ್ಕೆ ತೆರಳಿದ್ದು, ನಂತರ ಜಮಾತ್ ಉದ್ ದವಾ ಅಧ್ಯಕ್ಷ ಹಫೀಜ್ ಸಯೀದ್ ಮತ್ತು ಲಷ್ಕರ್ ಎ ತೊಯಿಬಾ ಅಧ್ಯಕ್ಷ ಜಕೀರ್ ಉರ್ ರೆಹಮಾನ್ ಲಖ್ವಿಯನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಮಸೀದಿಗಳಲ್ಲಿ ಜಿಹಾದಿ ಭಾಷಣ ಮಾಡುವಾಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು ಗೋದ್ರಾ ಹತ್ಯಾಕಾಂಡದ ಕುರಿತು ಚರ್ಚೆ ನಡೆಸಲಾಗುತ್ತಿದ್ದು, ಈ ವಿಷಯವಾಗಿ ಯುವಕರ ಮನಃಪರಿವರ್ತನೆ ಮಾಡಲಾಗುತ್ತಿದೆ ಎಂದು ದೆಹಲಿ ಪೊಲೀಸರ ವಿಶೇಷ ಪಡೆ ನ್ಯಾಯಾಲಯಕ್ಕೆ ತಿಳಿಸಿದೆ.
ಇಂತಹ ಭಾಷಣಗಳೇ ಶಂಕಿತ ಉಗ್ರ ಉಮರ್ ನನ್ನು ಜಿಹಾದ್ ನತ್ತ ಆಕರ್ಷಿತನಾಗುವಂತೆ ಮಾಡಿದ್ದು, ಈತನನ್ನು ಪಾಕಿಸ್ತಾನದಿಂದ ನಿಯಂತ್ರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಮೂವರು ಪಾಕ್ ಉಗ್ರರಿಗೆ ಆಶ್ರಯ ನೀಡಿದ್ದ. ಅವರನ್ನು 2001ರಲ್ಲಿ ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು ಎಂದು ಚಾರ್ಚ್ ಶೀಟ್ ನಲ್ಲಿ ದಾಖಲಿಸಲಾಗಿದೆ. ಅಲ್ಲದೆ ಉಗ್ರರು ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಕೂಡ ಸಂಚು ರೂಪಿಸಿದ್ದ ವಿಚಾರವನ್ನು ಚಾರ್ಜ್ ಶೀಟ್ ನಲ್ಲಿ ಪ್ರಸ್ತಾಪಿಸಲಾಗಿದ್ದು, ಆದರೆ ಅದಕ್ಕೂ ಮುನ್ನವೇ ಆತನನ್ನು ಎನ್ಕೌಂಟರ್ನಲ್ಲಿ ಕೊಲ್ಲಲಾದ ವಿಚಾರವನ್ನು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇನ್ನು ವಿಶೇಷ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಬಂಧಿತ ಐದು ಶಂಕಿತ ಉಗ್ರರ ಹೆಸರನ್ನು ನಮೂದಿಸಲಾಗಿದ್ದು, ಮಹಮದ್ ಆಸಿಫ್, ಝಫರ್ ಮಸೂದ್, ಮೊಹಮದ್ ಅಬ್ದುಲ್ ರೆಹಮಾನ್, ಸೈಯ್ಯದ್ ಅಂಜಾರ್ ಷಾ, ಅಬ್ದುಲ್ ಸಮಿ ಎಂಬುವವರನ್ನು ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಅಂತೆಯೇ ಎಲ್ಲ 17 ಮಂದಿ ಬಂಧಿತ ಶಂಕಿತ ಉಗ್ರರ ವಿರುದ್ಧ ಸೆಕ್ಷನ್ 18 (ಪಿತೂರಿ ನಡೆಸುವುದು), 18-ಬಿ (ಭಯೋತ್ಪಾದಕ ಚಟುವಟಿಕೆಗಾಗಿ ವ್ಯಕ್ತಿ ನೇಮಕ) 20 (ಭಯೋತ್ಪಾದಕ ಸಂಘಟನೆಯ ಸದಸ್ಯ)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ