ಕೇದಾರನಾಥಕ್ಕೆ ದಾಖಲೆ ಸಂಖ್ಯೆಯ ಭಕ್ತರ ಭೇಟಿ

ಪವಿತ್ರ ಕೇದಾರನಾಥ ದೇಗುಲಕ್ಕೆ ದಾಖಲೆ ಪ್ರಮಾಣದಲ್ಲಿ ಭಕ್ತರ ಆಗಮನವಾಗುತ್ತಿದ್ದು, ಚಾರ್ ಧಾಮ್ ಯಾತ್ರಾ ಆರಂಭವಾದಾಗಿನಿಂದ ಈ ವರೆಗೂ ಸುಮಾರು 2.75 ಲಕ್ಷ ಮಂದಿ ಕೇದಾರನಾಥನ ದರ್ಶನ ಪಡೆದಿದ್ದಾರೆ...
ಕೇದರನಾಥ ದೇಗುಲ (ಸಂಗ್ರಹ ಚಿತ್ರ)
ಕೇದರನಾಥ ದೇಗುಲ (ಸಂಗ್ರಹ ಚಿತ್ರ)

ಕೇದಾರನಾಥ: ಪವಿತ್ರ ಕೇದಾರನಾಥ ದೇಗುಲಕ್ಕೆ ದಾಖಲೆ ಪ್ರಮಾಣದಲ್ಲಿ ಭಕ್ತರ ಆಗಮನವಾಗುತ್ತಿದ್ದು, ಚಾರ್ ಧಾಮ್ ಯಾತ್ರಾ ಆರಂಭವಾದಾಗಿನಿಂದ ಈ ವರೆಗೂ ಸುಮಾರು 2.75 ಲಕ್ಷ  ಮಂದಿ ಕೇದಾರನಾಥನ ದರ್ಶನ ಪಡೆದಿದ್ದಾರೆ.

3 ವರ್ಷಗಳ ಹಿಂದೆ ಸಂಭವಿಸಿದ ಮೇಘಸ್ಪೋಟ ಮತ್ತು ಭೂಕುಸಿತದಿಂದ ತತ್ತರಿಸಿದ್ದ ಹಿಂದುಗಳ ಪವಿತ್ರ ಯಾತ್ರಾ ಸ್ಥಳ ಕೇದಾರನಾಥಕ್ಕೆ ಈವರ್ಷ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ  ಭಕ್ತರ ಆಗಮನವಾಗುತ್ತಿದ್ದು,  ಉತ್ತರಾಖಂಡ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ದೇಗುಲಕ್ಕೆ ಈಗಾಗಲೇ 2.75 ಲಕ್ಷ ಭಕ್ತಾದಿಗಳು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ದುರಂತದ  ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಭಕ್ತರ ಆಗಮನವಾಗಿದ್ದು, ಚಾರ್ ಧಾಮ್ ಯಾತ್ರೆ ಪೂರ್ಣಗೊಳ್ಳುವ ವೇಳೆಗೆ ಮತ್ತಷ್ಟು ಪ್ರಮಾಣದ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

2013 ರಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಉಂಟಾದ ಭೂಕುಸಿತ ಹಾಗೂ ಪ್ರವಾಹದಿಂದ ಸುಮಾರು 5,700 ಜನ ಪ್ರಾಣ ಕಳೆದುಕೊಂಡಿದ್ದರು. ಅಲ್ಲದೆ ಇಡೀ ಚಾರ್ ಧಾಮ್ ಯಾತ್ರಾ  ದೇಗುಲಗಳನ್ನು ಸಂಪರ್ಕಿಸುವ ರಸ್ತೆ ಮಾರ್ಗಗಳು ಹಾಳಾಗಿದ್ದವು. ಹೀಗಾಗಿ 2014-15 ನೇ ಸಾಲಿನಲ್ಲಿ ತೀರಾ ಕಡಿಮೆ ಯಾತ್ರಾರ್ಥಿಗಳು ಭೇಟಿ ನೀಡಿದ್ದರು. ಇದೀಗ ಉತ್ತರಾಖಂಡ ಸರ್ಕಾರ ಈ  ಎಲ್ಲ ಮಾರ್ಗಗಳನ್ನು ದುರಸ್ತಿಗೊಳಿಸಿದ್ದು, ಮಳೆ ಪ್ರಮಾಣ ಕೂಡ ತಗ್ಗಿರುವುದು ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿಸಿದೆ ಎಂದು ಕೇದಾರನಾಥ ಮತ್ತು ಬದ್ರಿನಾಥ ಮಂದಿರದ ಮುಖ್ಯ  ಕಾರ್ಯನಿರ್ವಹಣಾಧಿಕಾರಿ ಬಿ ಡಿ ಸಿಂಗ್ ಹೇಳಿದ್ದಾರೆ.

ಇನ್ನು 2012ರಲ್ಲಿ ಅತ್ಯಧಿಕ ಅಂದರೆ 10.5 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರೆ, ದುರಂತದ ಬಳಿಕ ಅಂದರೆ ಮೇಘಸ್ಫೋಟ ಸಂಭವಿಸಿದ ಜೂನ್ 16, 2013 ರ ಬಳಿಕ ಭಕ್ತರ ಸಂಖ್ಯೆ  ಗಣನೀಯವಾಗಿ ಇಳಿದಿತ್ತು. 2014-15ನೇ ಸಾಲಿನಲ್ಲಿ ಕೇವಲ 1.75 ಲಕ್ಷ ಭಕ್ತರು ದೇಗುಲಕ್ಕೆ ಆಗಮಿಸಿದ್ದರು ಎಂದು ಬಿಡಿ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com