

ಕೋಲ್ಕತಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಪಸಂಖ್ಯಾತ ಹಿಂದೂಗಳು ತಮ್ಮ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರದ ಮಧ್ಯಪ್ರವೇಶವನ್ನು ಎದುರುನೋಡುತ್ತಿದ್ದಾರೆ.
ಬಾಂಗ್ಲಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ತಮ್ಮ ರಕ್ಷಣೆಯ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ/ಭಾರತ ಸರ್ಕಾರ ಬಾಂಗ್ಲ ಸರ್ಕಾರದೊಂದಿಗೆ ಗಂಭೀರವಾಗಿ ಚರ್ಚಿಸಬೇಕು ಎಂದು ಹಿಂದೂಗಳು ಒತ್ತಾಯಿಸುತ್ತಿದ್ದಾರೆ. ನೆರೆಯ ರಾಷ್ಟ್ರದಲ್ಲಿರುವ ಮೂಲಭೂತವಾದಿ, ಜಮಾತ್ ಶಕ್ತಿಗಳು ಬಾಂಗ್ಲಾದಲ್ಲಿ ಹಿಂದೂಗಳನ್ನು ನಾಮಾವಶೇಷ ಮಾಡಲು ಯತ್ನಿಸುತ್ತಿದ್ದಾರೆ. ಭಾರತ ಬಹುಸಂಖ್ಯಾತ ಹಿಂದೂಗಳನ್ನು ಹೊಂದಿರುವ ರಾಷ್ಟ್ರವಾಗಿ ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಬಾಂಗ್ಲಾದ ಹಿಂದೂ, ಕ್ರೈಸ್ತ, ಬೌದ್ಧ ಒಕ್ಕೂಟದ ಪರಿಷತ್ ನ ಕಾರ್ಯದರ್ಶಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ರಾಣಾ ದಾಸ್ ಗುಪ್ತಾ ಹೇಳಿದ್ದಾರೆ.
ಇತ್ತೀಚೆಗಷ್ಟೇ 60 ವರ್ಷಗಳ ಹಿಂದೂ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ನಿತ್ಯರಂಜನ್ ಪಾಂಡೆ ಅವರನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಹತ್ಯೆ ಮಾಡಿದ್ದರು. ಇದಕ್ಕೂ ಮುನ್ನ ಮೂವರು ಹಿಂದೂಗಳನ್ನು ಹತ್ಯೆ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದ್ದು ಅಲ್ಪಸಂಖ್ಯಾತರಾಗಿರುವ ಹಿಂದೂಗಳ ನಾಮಾವಶೇಷ ಮಾಡುವ ಯತ್ನ ನಡೆಯುತ್ತಿದೆ. ಇದು ಹೀಗೇ ಮುಂದುವರೆದರೆ ಬಾಂಗ್ಲಾ- ಭಾರತದ ಶಾಂತಿಯುತ ಸಂಬಂಧಕ್ಕೆ ಧಕ್ಕೆ ಉಂಟಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ/ ಭಾರತ ಸರ್ಕಾರ ಮಧ್ಯಪ್ರವೇಶಿಸಿ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿಬರುತ್ತಿದೆ.