ನಾಗ್ಪುರದಲ್ಲಿ ವಿಚಿತ್ರ ಮಗು ಜನನ!

ನಾಗ್ಪುರದ ಲತಾ ಮಂಗೇಷ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರಲ್ಲಿ ವಿಚಿತ್ರ ಮಗುವೊಂದು ಜನನವಾಗಿದ್ದು, ಶರೀರದಲ್ಲಿ ಚರ್ಮವೇ ಇಲ್ಲದ ರೀತಿಯಲ್ಲಿ...
'ಹರ್ಲೇಕ್ವಿನ್ ಇಚ್​ತ್ಯೋಸಿಸ್' ಎಂಬ ಚರ್ಮ ಸಮಸ್ಯೆಯಿಂದ ಬಳಲುತ್ತಿರುವ ಮಗು
'ಹರ್ಲೇಕ್ವಿನ್ ಇಚ್​ತ್ಯೋಸಿಸ್' ಎಂಬ ಚರ್ಮ ಸಮಸ್ಯೆಯಿಂದ ಬಳಲುತ್ತಿರುವ ಮಗು

ನಾಗ್ಪುರ: ನಾಗ್ಪುರದ ಲತಾ ಮಂಗೇಷ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರಲ್ಲಿ ವಿಚಿತ್ರ ಮಗುವೊಂದು ಜನಿಸಿದ್ದು, ಶರೀರದಲ್ಲಿ ಚರ್ಮವೇ ಇಲ್ಲದ ರೀತಿಯಲ್ಲಿ ಮಗು ಹುಟ್ಟಿದೆ.

23 ವರ್ಷದ ಅಮರಾವತಿ ಎಂಬ ಮಹಿಳೆ ಶನಿವಾರ ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮನುಷ್ಯನ ಸಾಮಾನ್ಯ ದೈಹಿಕ ಲಕ್ಷಣಕ್ಕೆ ತದ್ವಿರುದ್ಧವಾಗಿ ಮಗುವಿನ ಜನನವಾಗಿದೆ.

ವೈದ್ಯರು ಹೇಳುವ ಪ್ರಕಾರ ಮಗು ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದು, ಈ ಸಮಸ್ಯೆಯನ್ನು ಹರ್ಲೇಕ್ವಿನ್ ಇಚ್​ತ್ಯೋಸಿಸ್ ನ್ಯೂನತೆ ಎಂದು ಹೇಳಿದ್ದಾರೆ.

ಮಗುವಿನ ದೇಹದ ಮೇಲೆ ಚರ್ಮವಿಲ್ಲ. ಚರ್ಮ ಕಸಿ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಮಗು ಹುಟ್ಟಿದಾಗ ಕೆಲ ಸಮಯ ಉಸಿರಾಟ ಸಮಸ್ಯೆಯಿಂದ ಬಳಲುತ್ತಿತ್ತು. ಇದೀಗ ಮಗುವಿಗೆ ಯಾವುದೇ ರೀತಿಯ ಉಸಿರಾಟ ಸಮಸ್ಯೆ ಎದುರಾಗಿಲ್ಲ. ಮಗುವನ್ನು ವೆಂಟಿಲೇಶನ್ ಕೊಠಡಿಯಲ್ಲಿ ಇರಿಸಲಾಗಿದೆ. ಮಗುವಿಗೆ ಚರ್ಮ ಆರೈಕೆ ಪ್ರಮುಖವಾಗಿದ್ದು, ಪೆಟ್ರೋಲಿಯಂ ಜೆಲ್ಲಿ ಹಾಗೂ ಕೊಬ್ಬರಿ ಎಣ್ಣೆಯ ಅವಶ್ಯಕವಿದೆ. ಹಾಗೂ ಮಗುವಿಗೆ ಪೌಷ್ಟಿಕಾಂಶಗಳನ್ನು ಒದಗಿಸಲಾಗುತ್ತಿದೆ ವೈದ್ಯರು ಹೇಳಿದ್ದಾರೆ.

ಈ ರೋಗದ ಲಕ್ಷಣಗಳೇನು...?
ಹರ್ಲೇಕ್ವಿನ್ ಇಚ್​ತ್ಯೋಸಿಸ್ ಅತ್ಯಂತ ವಿರಳ ಚರ್ಮರೋಗ ಸಮಸ್ಯೆಯಾಗಿದ್ದು, ಮೂರು ಲಕ್ಷದಲ್ಲಿ ಒಂದು ಮಗು ಈ ರೀತಿಯಾಗಿ ಜನಿಸುತ್ತದೆ. ಹರ್ಲೇಕ್ವಿನ್ ಇಚ್​ತ್ಯೋಸಿಸ್ ನ್ಯೂನತೆಯಿಂದ ಹುಟ್ಟಿದ ಮಕ್ಕಳು ಮನುಷ್ಯನ ಆಕಾರದಂತೆ ಕಂಡರೂ ಅಂಗಾಗಗಳ ಗುಣಲಕ್ಷಣಗಳು ಬೇರೆಯಾಗಿರುತ್ತದೆ. ದೇಹದಲ್ಲಿ ಚರ್ಮವಿರುವುದಿಲ್ಲ. ಬಿಳಿ ಪದರದಂತೆ ಕಾಣುವ ಚರ್ಮ, ದೇಹದ ಅಂಗಾಂಗಳು ಹೊರಗೆ ಕಾಣುವಂತಿರುತ್ತದೆ. ಇನ್ನು ಕಣ್ಣು, ಮೂಗು, ಕಿವಿ ಹಾಗೂ ಗುಪ್ತಾಂಗ ಕೂಡ ವಿಚಿತ್ರವಾಗಿದ್ದು, ಕೆಂಪು ಹಾಗೂ ದೊಡ್ಡದೊಡ್ಡ ಆಕಾರದಲ್ಲಿ ಕಂಡು ಬರುತ್ತದೆ.

ನ್ಯೂನತೆಗೆ ಕಾರಣವೇನು...?
ಹರ್ಲೇಕ್ವಿನ್ ಇಚ್​ತ್ಯೋಸಿಸ್ ಅಪಸಾಮಾನ್ಯತೆ ವಂಶವಾಹಿ ಸೀಳುವಿಕೆಯಿಂದ ಬರುತ್ತದೆ. ಈ ರೀತಿಯಾಗಿ ಹುಟ್ಟಿದ ಮಕ್ಕಳು ಬದುಕುಳಿಯುವುದು ಅತೀ ವಿರಳ ಎಂದು ವೈದ್ಯರು ಹೇಳುತ್ತಾರೆ.

ಗುಣಮುಖರಾಗಲು ಅವಕಾಶವಿದೆಯೇ...?
ಹರ್ಲೇಕ್ವಿನ್ ಇಚ್​ತ್ಯೋಸಿಸ್ ನ್ಯೂನತೆಯಿಂದ ಬಳಲುತ್ತಿರುವ ಮಗುವಿಗೆ ನೀಡಲು ಕೊಂಚ ಮಟ್ಟಿಗೆ ಚಿಕಿತ್ಸಾ ಸೌಲಭ್ಯವಿದ್ದರೂ ಕೂಡ ಮಗುವ ಸಂಪೂರ್ಣವಾಗಿ ಗುಣಮುಖವಾಗುವಂತೆ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ಜನನವಾಗಿರುವ ಮಗವನ್ನು ಬದುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ವೈದ್ಯರು ಹೇಳಿದ್ದು, ಮಗುವಿಗೆ ಅಗತ್ಯವಿರುವ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

1984 ರಲ್ಲಿ ಪಾಕಿಸ್ತಾನದಲ್ಲೂ ಇದೇ ರೀತಿಯ ಮಗುವೊಂದು ಹುಟ್ಟಿತ್ತು. ಈ ಮಗು 2008ರವರೆಗೆ ಬದುಕಿತ್ತು. ಇದರಂತೆ ಅಮೆರಿಕದಲ್ಲೂ ಇಂತಹದ್ದೇ ಮಗು 1994ರಲ್ಲಿ ಜನಿಸಿತ್ತು ಎಂದು ವರದಿಗಳು ತಿಳಿಸಿವೆ. ಭಾರತದಲ್ಲಿ ಈ ರೀತಿಯ ಮಗು ಜನಿಸಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com