
ಮುಂಬೈ: ಕಮಲ್ ನಾಥ್ಅವರು ರಾಜೀನಾಮೆ ನೀಡಿರುವುದು ನೋಡಿದರೆ, 1984ರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಭಾಗಿಯಾಗಿರುವುದನ್ನು ನಿರೂಪಿಸುತ್ತಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಗುರುವಾರ ಹೇಳಿದ್ದಾರೆ.
ಪಂಜಾಬ್ ರಾಜ್ಯ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕಮಲ್ ನಾಥ್ ಅವರು ರಾಜೀನಾಮೆ ಸಲ್ಲಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಮಲ್ ನಾಥ್ ಅವರು ರಾಜೀನಾಮೆ ಸಲ್ಲಿಸಿರುವ ವಿಚಾರ ಈಗಷ್ಟೇ ತಿಳಿಯಿತು. ಕಾಂಗ್ರೆಸ್ ಇದೀಗ ತನ್ನ ತಪ್ಪಿನ ಅರಿವಾದಂತಿದೆ. ಕಮಲ್ ನಾಥ್ ಅವರ ರಾಜೀನಾಮೆ ಪತ್ರದಿಂದ 1984ರಲ್ಲಿ ಸಿಖ್ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಭಾಗಿಯಾಗಿರುವುದು ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ ಹೈ ಕಮಾಂಡ್ ಪಂಜಾಬ್, ಹರಿಯಾಣ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಕಮಲ್ ನಾಥ್ ಅವರನ್ನು ಆಯ್ಕೆ ಮಾಡಿತ್ತು. ಆದರೆ, ಕಮಲ್ ನಾಥ್ ಆಯ್ಕೆಗೆ ಪಕ್ಷದಲ್ಲಿಯೇ ಅಸಮಧಾನ ವ್ಯಕ್ತವಾಗಿತ್ತು.
ಅಲ್ಲದೆ, ಸಿಖ್ ಗಲಭೆ ವೇಳೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಆದೇಶವನ್ನು ಪಾಲಿಸಿದ್ದಕ್ಕಾಗಿ ಕಮಲ್ ನಾಥ್ ಅವರಿಗೆ ಕಾಂಗ್ರೆಸ್ ಪಕ್ಷ ಪಂಜಾಬ್ ನ ಕಾಂಗ್ರೆಸ್ ಉಸ್ತುವಾರಿ ನೀಡುವ ಮೂಲಕ ಕಮಲ್ ನಾಥ್ ಅವನ್ನು ಪುರಸ್ಕರಿಸಿದೆ ಎಂದು ಆಪ್ ನಾಯಕರು ಆರೋಪಿಸಿದ್ದರು.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಂದು ಕಮಲ್ ನಾಥ್ ಅವರು ಪಂಜಾಬ್ ಚುನಾವಣೆ ಪ್ರಚಾರ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Advertisement