ತೀರ್ಪು ಸ್ವಾಗತಾರ್ಹ, ಆದರೆ ಕಠಿಣ ಶಿಕ್ಷೆಗಾಗಿ ಮೇಲ್ಮನವಿ: ತೀಸ್ತಾ ಸೆಟಲ್ವಾಡ್

ಗುಲ್ಬರ್ಗ್ ಹತ್ಯಾಕಾಂಡದ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ವಿಧಿಸಿರುವ ಅಹ್ಮದಾಬಾದ್ ವಿಶೇಷ ನ್ಯಾಯಾಲದ ತೀರ್ಪನ್ನು ತಾವು ಸ್ವಾಗತಿಸುವುದಾಗಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹೇಳಿದ್ದಾರೆ...
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ (ಸಂಗ್ರಹ ಚಿತ್ರ)
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ (ಸಂಗ್ರಹ ಚಿತ್ರ)

ನವದೆಹಲಿ: ಗುಲ್ಬರ್ಗ್ ಹತ್ಯಾಕಾಂಡದ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ವಿಧಿಸಿರುವ ಅಹ್ಮದಾಬಾದ್ ವಿಶೇಷ ನ್ಯಾಯಾಲದ ತೀರ್ಪನ್ನು ತಾವು ಸ್ವಾಗತಿಸುವುದಾಗಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹೇಳಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಮಾಜಿ ಕಾಂಗ್ರೆಸ್ ಮುಖಂಡ ಎಹ್ಸಾನ್ ಜೆಫ್ರಿ ಸೇರಿದಂತೆ ಸುಮಾರು 69 ಮಂದಿಯ ಮಾರಣ ಹೋಮಕ್ಕೆ ಕಾರಣವಾಗಿದ್ದ ಗೋದ್ರೋತ್ತರ ಹಿಂಸಾಚಾರದ ಗುಲ್ಬರ್ಗ್ ಹತ್ಯಾಕಾಂಡದ ತೀರ್ಪು  ಪ್ರಕಟಿಸಿರುವ ಅಹ್ಮದಾಬಾದ್ ನ್ಯಾಯಾಲಯ 24 ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಘೋಷಣೆ ಮಾಡಿದೆ. ಈ ಪೈಕಿ ಕೊಲೆ ಪ್ರಕರಣದ ಮೇರೆಗೆ 11 ಮಂದಿಗೆ ಜೀವಾವಧಿ ಶಿಕ್ಷೆ  ವಿಧಿಸಲಾಗಿದ್ದು, ಇತರೆ ಆರೋಪಗಳಡಿಯಲ್ಲಿ ಬಂಧಿತರಾಗಿರುವ ಉಳಿದ 13 ಮಂದಿಗೆ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಇನ್ನು ಅತ್ತ ನ್ಯಾಯಾಲಯ ಶಿಕ್ಷೆ ಪ್ರಮಾಣ ಮಾಡುತ್ತಿದ್ದಂತೆಯೇ ಇತ್ತ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು, ನ್ಯಾಯಾಲಯದ ತೀರ್ಪು  ಸ್ವಾಗತಾರ್ಹ ಎಂದಿದ್ದಾರೆ. ಆದರೆ ಅಪರಾಧಿಗಳಿಗೆ ಕಡಿಮೆ ಶಿಕ್ಷೆ ಪ್ರಮಾಣ ನೀಡಲಾಗಿದೆ ಎಂದು ಬೇಸರವ ವ್ಯಕ್ತಪಡಿಸಿದ ಅವರು, ಅಪರಾಧಿಗಳಿಗೆ ನ್ಯಾಯಾಲಯ ಗರಿಷ್ಠ ಪ್ರಮಾಣದ ಶಿಕ್ಷೆ  ವಿಧಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ಇತರೆ ಆರೋಪಗಳಡಿಯಲ್ಲಿ 7 ವರ್ಷ ಸಜೆ ಪಡೆದಿರುವ 13 ಮಂದಿ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿರುವ ತೀಸ್ತಾ ಅವರು, ಅಪರಾಧಿಗಳಿಗೆ  ಕಠಿಣ ಶಿಕ್ಷೆ ವಿಧಿಸುವಂತೆ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com