
ನವದೆಹಲಿ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಂತರ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರ ನೇಮಕವನ್ನು ಹಣಕಾಸು ಸಚಿವಾಲಯ ಬುಧವಾರ ಸಮರ್ಥಿಸಿಕೊಂಡಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವಾಲಯವು, (ಐಪಿಆರ್) ಬೌದ್ಧಿಕ ಆಸ್ತಿ ಹಕ್ಕು ಕುರಿತಂತಿರುವ ಸಮಸ್ಯೆಗಳ ಅರಿವು ಸಚಿವಾಲಯಕ್ಕೆ ಇದ್ದು, ತನ್ನ ನಿಲುವಿನ ಬಗ್ಗೆ ತನಗೆ ಅರಿವಿದೆ. ಅರವಿಂದ ಸುಬ್ರಮಣಿಯನ್ ಬಗ್ಗೆ ಸ್ವಾಮಿ ನೀಡುತ್ತಿರುವ ಹೇಳಿಕೆಯ ಮೇಲೆ ಸಚಿವಾಲಯ ಭರವಸೆಯಿಡುವುದಿಲ್ಲ ಎಂದು ಹೇಳಿದೆ.
ಸರ್ಕಾರ ಪರಿಶೀಲಿಸುತ್ತಿರುವ ಐವರು ಅಭ್ಯರ್ಥಿಗಳ ಪೈಕಿ ಭಾರತದ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರ ಉತ್ತರಾಧಿಕಾರಿಯಾಗಿ ನೇಮಕ ಮಾಡಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಅರವಿಂದ ಸುಬ್ರಮಣಿಯನ್ ವಿರುದ್ದ ಟ್ವಿಟರ್ ನಲ್ಲಿ ಕಿಡಿಕಾರಿದ್ದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಜಾರಿಗೊಳಿಸಿದ್ದ ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಮಾತ್ರವಲ್ಲದೆ, ಆಡಳಿತಾರೂಢ ಎನ್ ಡಿಎ ಸರ್ಕಾರದ ನೀತಿ ಮತ್ತು ಆಶಯಗಳನ್ನು ಅರವಿಂದ ಅವರು ವಿರೋಧಿಸಿದ್ದರು. ಅಮೆರಿಕದ ಔಷಧೀಯ ಹಿತಾಸಕ್ತಿಗಳನ್ನು ಸಂರಕ್ಷಿಸಿಕೊಳ್ಳಲು ಅಮೆರಿಕ ಭಾರತದ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯಾರು ಹೇಳಿದ್ದು? ಇದನ್ನು ಹೇಳಿದ್ದು, ಅರವಿಂದ ಸುಬ್ರಮಣಿಯನ್ ಅವರೇ ಇಂತಹ ವ್ಯಕ್ತಿಗೆ ಅಧಿಕಾರ ನೀಡಬಾರದು ಎಂದು ಹೇಳಿದ್ದರು.
Advertisement