ದೆಹಲಿ ಸ್ಲಂ ಬಾಲಕನಿಗೆ ಸಿಕ್ತು "ಇಸ್ರೋ" ಆಹ್ವಾನ

ಭಾರತದ ಬಾಹ್ಯಾಕಾಶ ಸಂಸ್ಥೆ ಬರೊಬ್ಬರಿ 20 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿ ಐತಿಹಾಸಿಕ ದಾಖಲೆ ನಿರ್ಮಿಸಿತ್ತು. ಇಸ್ರೋದ ಈ ಐತಿಹಾಸಿಕ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆಹ್ವಾನ ಬಂದಿದೆ ಎಂದರೆ ಆ ವ್ಯಕ್ತಿ ಇನ್ನೆಷ್ಟು ಪ್ರತಿಷ್ಟಿತನಾಗಿರಬೇಡ...
ಗಗನ ಯಾತ್ರಿ ಸುನಿತಾ ವಿಲಿಯಮ್ಸ್ ರೊಂದಿಗೆ ಆರ್ಯನ್ ಮಿಶ್ರಾ (ಸಂಗ್ರಹ ಚಿತ್ರ)
ಗಗನ ಯಾತ್ರಿ ಸುನಿತಾ ವಿಲಿಯಮ್ಸ್ ರೊಂದಿಗೆ ಆರ್ಯನ್ ಮಿಶ್ರಾ (ಸಂಗ್ರಹ ಚಿತ್ರ)

ಸಾಧಿಸುವ ಛಲ ಒಂದಿದ್ದರೆ ಸಾಕು ಅದೇ ನಮ್ಮನ್ನು ಗುರಿ ಮುಟ್ಟಿಸುತ್ತದೆ ಎಂಬುದಕ್ಕೆ ಇಲ್ಲೊಬ್ಬ ಯುವ ವಿಜ್ಞಾನಿ ಸಾಕ್ಷಿಯಾಗಿ ನಿಂತಿದ್ದಾನೆ. ನಿನ್ನೆಯಷ್ಟೇ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬರೊಬ್ಬರಿ 20 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿ ಐತಿಹಾಸಿಕ ದಾಖಲೆ ನಿರ್ಮಿಸಿತ್ತು. ಇಸ್ರೋದ ಈ ಐತಿಹಾಸಿಕ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆಹ್ವಾನ ಬಂದಿದೆ ಎಂದರೆ ಆ  ವ್ಯಕ್ತಿ ಇನ್ನೆಷ್ಟು ಪ್ರತಿಷ್ಟಿತನಾಗಿರಬೇಡ.

ದೇಶದ ಪ್ರಧಾನಿ, ರಾಷ್ಟ್ರಪತಿ ಮತ್ತು ಖ್ಯಾತ ವಿಜ್ಞಾನಿಗಳಿಗೆ ನೀಡಲಾಗುವ ಆಹ್ವಾನವನ್ನು ದೆಹಲಿಯ 16 ವರ್ಷದ ಸ್ಲಂ ಬಾಲಕನಿಗೆ ನೀಡಲಾಗಿದೆ ಎಂದರೆ ಆತನ ಸಾಧನೆ ಕುರಿತು ಹೇಳಬೇಕಿಲ್ಲ.  ಇಂತಹ ಅಪರೂಪದ ಗೌರವಕ್ಕೆ ಪಾತ್ರನಾಗಿರುವುದು 16 ವರ್ಷದ ಯುವ ವಿಜ್ಞಾನಿ ಆರ್ಯನ್ ಮಿಶ್ರಾ. ದೆಹಲಿಯ ವಸಂತ್ ಕಾಲೋನಿಯಲ್ಲಿರುವ ಸ್ಲಂ ನಿವಾಸಿಯಾಗಿರುವ ಆರ್ಯನ್ ಮಿಶ್ರಾ  ನಿನ್ನೆ ಶ್ರೀಹರಿಕೋಟಾದಲ್ಲಿ ನಡೆದ ಐತಿಹಾಸಿಕ ಪಿಎಸ್ ಎಲ್ ವಿ-ಸಿ34 ಉಡಾವಣೆಗೆ ಸಾಕ್ಷಿಯಾಗಿದ್ದ. ಇಸ್ರೋ ನೀಡಿದ್ದ ಆಹ್ವಾನದ ಮೇರೆಗೆ ಆತ ಶ್ರೀ ಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ  ಕೇಂದ್ರಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ.

ಇಷ್ಟಕ್ಕೂ ಯಾರು ಈ ಆರ್ಯನ್ ಮಿಶ್ರಾ?


ಮೂಲತಃ ದೆಹಲಿಯ ವಸಂತ್ ನಗರ ಕಾಲೋನಿಯ ನಿವಾಸಿಯಾದ ಆರ್ಯನ್ ಮಿಶ್ರಾ, ದೆಹಲಿಯ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿ. ತೀರ ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ಆರ್ಯನ್  ಮಿಶ್ರಾ, ಬೆಳಗ್ಗೆ 4 ಗಂಟೆಗೇ ಎದ್ದು ಮನೆ-ಮನೆಗೂ ಪೇಪರ್ ಹಾಕಿ ಬಳಿಕೆ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆದರೆ ಬಡತನವಿದ್ದರೂ ಆರ್ಯನ್ ಮಿಶ್ರಾ ತಂದೆ ಮಾತ್ರ ಆತನ  ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಬಾಹ್ಯಾಕಾಶ ವಿಷಯಕ್ಕೆ ಸಂಬಂಧಿಸಿದಂತೆ ಅಪಾರ ಆಸಕ್ತಿ ಹೊಂದಿರುವ ಆರ್ಯನ್ ಮಿಶ್ರಾ, ಇತ್ತೀಚೆಗೆ ಶನಿ ಗ್ರಹದ ಸುತ್ತಲಿರುವ  ಉಂಗುರಗಳನ್ನು ಪತ್ತೆ ಮಾಡುವ ಮೂಲಕ ಇಡೀ ಬಾಹ್ಯಾಕಾಶ ಕ್ಷೇತ್ರದ ವಿಜ್ಞಾನಿಗಳೇ ದಂಗಾಗುವಂತೆ ಮಾಡಿದ್ದ. ತನ್ನ ಶಾಲಾ ಶಿಕ್ಷಕರ ನೆರವಿನೊಂದಿಗೆ 2014ರಲ್ಲಿ ತನ್ನ ಸ್ನೇಹಿತ ಕೀರ್ತಿ  ವರ್ಧನ್ ಜೊತೆಗೂಡಿ ಸಂಶೋಧನೆ ಕೈಗೊಂಡಿದ್ದ ಆರ್ಯನ್ ಮಿಶ್ರಾ, ಭೂಮಿಯ ಸಮೀಪದಲ್ಲಿ ಶನಿ ಗ್ರಹ ಹಾದುಹೋಗವ ವೇಳೆ ಕ್ಷುದ್ರಗ್ರಹ ಮಾದರಿಯಲ್ಲಿದ್ದ ಶನಿಯ ಭವ್ಯ ಉಂಗುರಗಳನ್ನು  ಪತ್ತೆ ಮಾಡಿದ್ದ. ಬಳಿಕ ಈ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಕೈಗೊಂಡಾಗ ಅದು ಸ್ಪಷ್ಟವಾಗಿತ್ತು. ಹೀಗಾಗಿ ಆರ್ಯನ್ ಮಿಶ್ರಾ ಕಂಡು ಹಿಡಿದ ಶನಿಯ ಭವ್ಯ ಉಂಗುರಗಳಿಗೆ 2014 00372 ಎಂದು  ನಾಮಕರಣ ಮಾಡಲಾಯಿತು. ಆರ್ಯನ್ ಮಿಶ್ರಾನ ಈ ಸಾಧನೆಯನ್ನು ಗುರುತಿಸಿರುವ ಇಸ್ರೋ ನಿನ್ನೆ ನಡೆದ ಪಿಎಸ್ ಎಲ್ ವಿ-ಸಿ34 ಉಡಾವಣೆ ವೀಕ್ಷಿಸುವ ಸಲುವಾಗಿ ವಿಶೇಷ ಅತಿಥಿ ಆಹ್ವಾನ  ನೀಡಿದೆ.

ಆರ್ಯನ್ ಮಿಶ್ರಾನ ಹೆಸರಲ್ಲಿ ಯಂಗ್ ಅಸ್ಟ್ರಾನಮರ್-ಆರ್ಯನ್ ಮಿಶ್ರಾ ಎಂಬ ಫೇಸ್ ಬುಕ್ ಪೇಜ್ ಇದ್ದು, ಈಗಾಗಲೇ ಈ ಪೇಜ್ ಅನ್ನು ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಲೈಕ್  ಮಾಡಿದ್ದಾರೆ.

ಇನ್ನು ಈ ಬಗ್ಗೆ ಅತೀವ ಸಂತಸದಿಂದ ಮಾತನಾಡಿರುವ ಆರ್ಯನ್ ಮಿಶ್ರಾ, ಬಾಹ್ಯಾಕಾಶ ನೌಕೆ ಉಡಾವಣೆಯನ್ನು ಹತ್ತಿರದಿಂದ ನೋಡಬೇಕು ಎನ್ನುವ ಬಯಕೆ ಇದೀಗ ಈಡೇರಿದೆ.  ಬಾಹ್ಯಾಕಾಶ ಕ್ಷೇತ್ರದಲ್ಲಿಯೇ ನನ್ನ ವೃತ್ತಿ ಆರಂಭಿಸಬೇಕು ಎನ್ನುವುದು ನನ್ನ ಬಯಕೆಯಾಗಿದ್ದು, ಇದಕ್ಕೆ ನನಗೆ ನೆರವಿನ ಅಗತ್ಯವಿದೆ ಎಂದು ಆರ್ಯನ್ ಮಿಶ್ರಾ ಹೇಳಿದ್ದಾನೆ. ಇನ್ನು ತನ್ನ ಸ್ನೇಹಿತ  ಸಾಧನೆ ಕುರಿತು ಮತ್ತು ಹತ್ತಿರದಿಂದ ಬಾಹ್ಯಾಕಾಶ ಉಡಾವಣೆ ವೀಕ್ಷಿಸಿದ ಕುರಿತು ಸಂತಸ ವ್ಯಕ್ತಪಡಿಸಿರುವ ಆತನ ಮಿತ್ರ ಕೀರ್ತಿ ವರ್ಧನ್ ಹಾಗೂ ಚಿನ್ಮಯ್ ವಿದ್ಯಾಶಾಲೆಯ ಸಿಬ್ಬಂದಿಗಳು  ಆರ್ಯನ್ ಮಿಶ್ರಾಗೆ ಶುಭಾಶಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com