ಬಾಬ್ರಿ ಮಸೀದಿ ಧ್ವಂಸ ಬೆನ್ನಲ್ಲೇ ಸೋನಿಯಾ ಮೇಲೆ ಐಬಿ ನಿಗಾ ಇರಿಸಿದ್ದ ನರಸಿಂಹರಾವ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬಾಬ್ರಿ ಮಸೀದಿ ಧ್ವಂಸದ ಬಳಿಕ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಶುರುವಾಗಿದ್ದು, ಇದಕ್ಕಾಗಿ ಅವರು ಸೋನಿಯಾ ಗಾಂಧಿ ಅವರ ಮೇಲೆ ಗುಪ್ತಚರ ಇಲಾಖೆ ಮೂಲಕವಾಗಿ ನಿಗಾ ಇರಿಸಿದ್ದರು ಎಂದು ಹೇಳಲಾಗುತ್ತಿದೆ...
ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಹಾಗೂ ಸೋನಿಯಾಗಾಂಧಿ (ಸಂಗ್ರಹ ಚಿತ್ರ)
ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಹಾಗೂ ಸೋನಿಯಾಗಾಂಧಿ (ಸಂಗ್ರಹ ಚಿತ್ರ)

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬಾಬ್ರಿ ಮಸೀದಿ ಧ್ವಂಸದ ಬಳಿಕ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಶುರುವಾಗಿದ್ದು, ಇದಕ್ಕಾಗಿ  ಅವರು ಸೋನಿಯಾ ಗಾಂಧಿ ಅವರ ಮೇಲೆ ಗುಪ್ತಚರ ಇಲಾಖೆ ಮೂಲಕವಾಗಿ ನಿಗಾ ಇರಿಸಿದ್ದರು ಎಂದು ಹೇಳಲಾಗುತ್ತಿದೆ.

ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಕುರಿತು ದಾಖಲೆ ಪತ್ರಗಳನ್ನು ಹೊಂದಿರುವ ಲೇಖಕ ವಿನಯ್ ಸೀತಾಪತಿ ಎಂಬುವವರು ಬರೆದಿರುವ ಹಾಫ್ ಲಯನ್: ಹೌ ಪಿವಿ ನರಸಿಂಹರಾವ್  ಟ್ರಾನ್ಸ್ ಫಾರ್ಮ್ಡ್ ಇಂಡಿಯಾ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಬಾಬ್ರಿ ಮಸೀದಿ ಧ್ವಂಸ ಘಟನೆಯಿಂದ ನರಸಿಂಹರಾವ್ ವಿರುದ್ಧ ಕಾಂಗ್ರೆಸ್‌ನೊಳಗೆ ಅಸಮಾಧಾನ  ಭುಗಿಲೆದ್ದಿತ್ತು. ಈ ವಿಷಯವನ್ನು ಮೊದಲೇ ಅರಿತಿದ್ದ ರಾವ್ ಅವರು, ಸಂಪುಟದಲ್ಲಿರುವ ಎಷ್ಟು ಮಂದಿ ನನ್ನ ಪರವಾಗಿದ್ದಾರೆ? ಎಷ್ಟು ಮಂದಿ ೧೦, ಜನಪಥ್ (ಸೋನಿಯಾ ಗಾಂಧಿ) ನಿವಾಸದ  ಪರವಾಗಿದ್ದಾರೆ ಎಂದು ಮಾಹಿತಿ ಕಲೆಹಾಕುವಂತೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ಹಿನ್ನಲೆಯಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಗಳು ಸೋನಿಯಾ ಗಾಂಧಿ ಅವರ ಆಪ್ತರ ಮೇಲೆ ನಿಗಾ ಇಟ್ಟಿದ್ದರು ಎಂದು ಪುಸ್ತಕದಲ್ಲಿ ಹೇಳಲಾಗಿದೆ. ಅಂತೆಯೇ ದೇಶಾದ್ಯಂತ ಸುತ್ತಿ ಮಾಹಿತ  ಕಲೆಹಾಕಿದ್ದ ಐಬಿ ಅಧಿಕಾರಿಗಳು ಸಚಿವರ ‘ರಾಜ್ಯ’ ‘ಜಾತಿ’ ‘ವಯಸ್ಸು’ ‘ನಿಷ್ಠೆ’ ಕುರಿತಂತೆ ಪ್ರಧಾನಿ ರಾವ್ ಅವರಿಗೆ ವರದಿ ಸಲ್ಲಿಸಿದ್ದರು. ಇದರಲ್ಲಿ 52 ವರ್ಷದ ತಮಿಳುನಾಡಿನ ಮಣಿಶಂಕರ್  ಅಯ್ಯರ್ ಬಾಬ್ರಿ ವಿಚಾರದಿಂದ ಸೋನಿಯಾ ಗಾಂಧಿ ಮೇಲೆ ನಿಷ್ಠೆ ಹೊಂದಿದ್ದಾರೆ. 53 ವರ್ಷದ ಕರ್ನಾಟಕ ಕ್ರೈಸ್ತ ಸಮುದಾಯದ ಮಾರ್ಗರೇಟ್ ಆಳ್ವಾ ಕೂಡ ಸೋನಿಯಾ ಪರ ಒಲವು  ಹೊಂದಿದ್ದು, ಅವರನ್ನು ಬೇಕಿದ್ದರೆ ಸಂಪುಟದಿಂದ ಕೈಬಿಟ್ಟು, ಪಕ್ಷದ ಸಂಘಟನೆಗೆ ಬಳಸಿಕೊಳ್ಳಬಹುದು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದರು ಎಂದು ಪುಸ್ತಕದಲ್ಲಿ  ತಿಳಿಸಿದ್ದಾರೆ.

ಇನ್ನು ಮತ್ತೊಂದು ಪ್ರಮುಖ ಅಂಶವೆಂದರೆ. ಅಂದು ಪಿವಿ ನರಸಿಂಹರಾವ್ ಅವರ ಸಂಪುಟದಲ್ಲಿದ್ದ ಪ್ರಮುಖ ಸಚಿವರೇ ಸರ್ಕಾರದ ಸೂಕ್ಷ್ಮಾತಿ ಸೂಕ್ಷ್ಮಿ ವಿಷಯಗಳನ್ನು ಸೋನಿಯಾ ಗಾಂಧಿ  ಅವರಿಗೆ ತಲುಪಿಸುತ್ತಿದ್ದರು ಎಂದೂ ಕೃತಿಯಲ್ಲಿ ಸೀತಾಪತಿ ಅವರು ವಿವರಿಸಿದ್ದಾರೆ. ರಾಜೀವ್‌ಗಾಂಧಿ ಹತ್ಯೆ ಬಳಿಕ ಎರಡು ವರ್ಷ ಸೋನಿಯಾ ಗಾಂಧಿ ಮನೆಯಲ್ಲೇ ಇದ್ದರೂ, ರಾವ್ ಸಂಪುಟದ  ಅನೇಕ ಸಚಿವರು ಆಗಾಗ್ಗೆ ಅವರನ್ನು ಭೇಟಿಯಾಗಿ ಮಾಹಿತಿ ನೀಡುತ್ತಿದ್ದರು. ಇಷ್ಟಾದರೂ ಸರ್ಕಾರದ ನೀತಿ ನಿರೂಪಣೆ ವಿಚಾರದಲ್ಲಿ ಸೋನಿಯಾ ಅವರಿಗೆ ಮೂಗು ತೂರಿಸಲು ರಾವ್  ಬಿಡುತ್ತಿರಲಿಲ್ಲ.

ಹೀಗಾಗಿ ನರಸಿಂಹರಾವ್ ಅವರ ವಿರುದ್ಧ ಅಸಮಾಧಾನ ಗೊಂಡಿದ್ದ ಸೋನಿಯಾ ಬಳಿಕ ರಾವ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಅವರನ್ನು ಮೂಲೆಗುಂಪು ಮಾಡುವಲ್ಲಿ  ಸೋನಿಯಾ ಯಶಸ್ವಿಯಾಗಿದ್ದರು. 2004ರಲ್ಲಿ ಅವರು ಸಾವನ್ನಪ್ಪಿದಾಗ ದೆಹಲಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಿರಲಿಲ್ಲ ಎಂದು ಪುಸ್ತಕದಲ್ಲಿ ತಿಳಿಸಿದ್ದಾರೆ.

ಲೇಖಕ ಸೀತಾಪತಿ ಅವರ ಈ ಕೃತಿಯಲ್ಲಿ ಸೋನಿಯಾ ಮತ್ತು ಪಿವಿ ನರಸಿಂಹರಾವ್ ಅವರ ನಡುವಿನ ವೈಮನಸ್ಸಿನ ಅನೇಕ ವಿಚಾರಗಳು ಉಲ್ಲೇಖಗೊಂಡಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.  ರಾವ್ ಹಾಗೂ ಅವರ ಸರ್ಕಾರದ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ನೂರಕ್ಕೂ ಅಧಿಕ ಮಂದಿಯನ್ನು ಸಂದರ್ಶಿಸಿ ವಿನಯ್ ಕೃತಿಯನ್ನು ರಚಿಸಿದ್ದು, ಇದೇ ಜೂನ್ 27ರಂದು ಪುಸ್ತಕ  ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com