
ವಾಷಿಂಗ್ಟನ್: ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಮತ ಹಾಕಲು ಅಮೆರಿಕದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಭಾರತದ ಪ್ರಮುಖ ರಾಜಕೀಯ ನಾಯಕರಿಂದ ಮತ್ತು ಸಂಸ್ಥೆಗಳಿಂದ ಹಣ ಪಡೆದುಕೊಂಡಿದ್ದಾರೆ ಎಂದು ಅವರ ಪ್ರತಿಸ್ಪರ್ಧಿ, ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
35 ಪುಟಗಳ ಪುಸ್ತಕ ಮಾದರಿಯಲ್ಲಿ ಟ್ರಂಪ್ ತಮ್ಮ ಚುನಾವಣಾ ಪ್ರಚಾರವನ್ನು ಬಿಡುಗಡೆ ಮಾಡಿದ್ದು, ಈ ಆರೋಪಗಳನ್ನು ಈ ಹಿಂದೆ ಕೂಡ ಅನೇಕ ಬಾರಿ ಮಾಡಿದ್ದರು. ಅದನ್ನು ಹಿಲರಿ ಕ್ಲಿಂಟನ್ ಅಲ್ಲಗಳೆಯುತ್ತಾ ಬಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಆರೋಪದ ಪ್ರಕಾರ, 2008ರಲ್ಲಿ ಭಾರತದ ಪ್ರಮುಖ ರಾಜಕಾರಣಿ ಅಮರ್ ಸಿಂಗ್ ಕ್ಲಿಂಟನ್ ಫೌಂಡೇಶನ್ ಗೆ 10 ಲಕ್ಷ ಅಮೆರಿಕನ್ ಡಾಲರ್ ನಿಂದ 50 ಲಕ್ಷ ಡಾಲರ್ ವರೆಗೆ ಧನ ಸಹಾಯ ನೀಡಿದ್ದಾರೆ.2008ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಿಂಗ್, ನಾಗರಿಕ ಪರಮಾಣು ತಂತ್ರಜ್ಞಾನವನ್ನು ಪಡೆಯಲು ಲಾಬಿ ನಡೆಸಲು ಹೋಗಿದ್ದರು. ಆಗ ಸೆನೆಟರ್ ಆಗಿದ್ದ ಹಿಲರಿ ಕ್ಲಿಂಟನ್ ಒಪ್ಪಂದಕ್ಕೆ ಡೆಮಾಕ್ರಟಿಕ್ ಪಕ್ಷ ಅಡ್ಡಗಾಲು ಹಾಕುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಟ್ರಂಪ್ ತಮ್ಮ ಚುನಾವಣಾ ರ್ಯಾಲಿಯಲ್ಲಿ ಆರೋಪಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
2008ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ 5 ಲಕ್ಷ ಡಾಲರ್ ನಿಂದ 1 ದಶಲಕ್ಷ ಡಾಲರ್ ವರೆಗೆ ಕ್ಲಿಂಟನ್ ಫೌಂಡೇಶನ್ ಗೆ ನೆರವು ನೀಡಿದೆ. ಕ್ಲಿಂಟನ್ ಅವರ ಸಲಹೆ ಮೇರೆಗೆ ಭಾರತೀಯ-ಅಮೆರಿಕನ್ ರಾಜ್ ಫೆರ್ನಾಂಡೋ ಅವರನ್ನು ರಾಜ್ಯ ಇಲಾಖೆಗಳ ಅಂತಾರಾಷ್ಟ್ರೀಯ ಭದ್ರತಾ ಸಲಹಾ ಸಮಿತಿಗೆ ಆಯ್ಕೆ ಮಾಡಿದ್ದರು.ಫೆರ್ನಾಂಡೋ ಕೂಡ ಕ್ಲಿಂಟನ್ ಫೌಂಡೇಶನ್ ಗೆ 1 ದಶಲಕ್ಷ ಡಾಲರ್ ನಿಂದ 5 ದಶಲಕ್ಷ ಡಾಲರ್ ವರೆಗೆ ಹಣ ನೀಡಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
Advertisement